ಸಾರಾಂಶ
ನವದೆಹಲಿ: ತಮ್ಮ ನಿವಾಸಕ್ಕೆ ಬೆಂಕಿ ಬಿದ್ದಾಗ ಕಂತೆಕಂತೆ ನೋಟು ಪತ್ತೆಯಾದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿರುವ ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾ। ಯಶವಂತ್ ವರ್ಮಾ ಅವರ ಮನೆ ಬಳಿಯ ಕಸದ ತೊಟ್ಟಿಯಲ್ಲಿ ಕೂಡ ಸುಟ್ಟ 500 ರು. ನೋಟುಗಳು ಪತ್ತೆಯಾಗಿವೆ.
‘ಕೆಲ ಸ್ವಚ್ಛತಾ ಕಾರ್ಮಿಕರು ಅರ್ಧಂಬರ್ಧ ಸುಟ್ಟ 500 ರು. ನೋಟುಗಳು ಸಿಕ್ಕಿರುವುದಾಗಿ ಹೇಳಿದ್ದಾರೆ’ ಎಂದು ಎನ್‌ಎಐ ಸುದ್ದಿ ಸಂಸ್ಥೆ ಅವರ ಹೇಳಿಕೆಯ ವಿಡಿಯೋ ಪ್ರಕಟಿಸಿದೆ.
ಇಂದ್ರಜೀತ್ ಎಂಬ ಸ್ವಚ್ಛತಾ ಕರ್ಮಿ ಮಾತನಾಡಿ, ‘4-5 ದಿನಗಳ ಹಿಂದೆ ಇಲ್ಲಿ ಕಸ ಸಂಗ್ರಹಿಸುತ್ತಿದ್ದಾಗ ಸುಟ್ಟ ₹500ರ ನೋಟಿನ ಚೂರುಗಳು ಸಿಕ್ಕಿದ್ದವು. ಇಂದು1-2 ತುಂಡುಗಳು ದೊರಕಿವೆ. ಆದರೆ ಎಲ್ಲಿ ಬೆಂಕಿ ಬಿದ್ದಿತ್ತು ಎಂಬುದು ತಿಳಿದಿಲ್ಲ’ ಎಂದಿದ್ದಾನೆ.
ಈಗಾಗಲೇ ಪ್ರಕರಣ ಕುರಿತ ತನಿಖಾ ವರದಿಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನ ಮುಖ್ಯಾ ನ್ಯಾ। ಸಂಜೀವ್ ಖನ್ನಾ ಅವರಿಗೆ ಸಲ್ಲಿಸಿದ್ದಾರೆ.
ಸಿಕ್ಕಿದ್ದು ನನ್ನ ದುಡ್ಡಲ್ಲ: ನ್ಯಾ। ವರ್ಮಾ
ನವದೆಹಲಿ: ‘ಬೆಂಕಿ ಅವಘಡ ವೇಳೆ ತಮ್ಮ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣಕ್ಕೂ ನನಗೂ, ನನ್ನ ಕುಟುಂಬಕ್ಕೂ ಸಂಬಂಧವೇ ಇಲ್ಲ’ ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾ। ಯಶವಂತ್ ವರ್ಮಾ ಸ್ಪಷ್ಟನೆ ನೀಡಿದ್ದಾರೆ.ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸ್ಪಷ್ಟನೆ ನೀಡಿರುವ ಅವರು, ‘ನಾನಾಗಲಿ, ನನ್ನ ಕುಟುಂಬವಾಗಲಿ ಆ ಕೋಣೆಯಲ್ಲಿ ಹಣ ಸಂಗ್ರಹಿಸಿಯೇ ಇಲ್ಲ. ಇದು ನನ್ನನ್ನು ಸಿಕ್ಕಿಸಿ ಹಾಕಲು ಮತ್ತು ತೇಜೋವಧೆ ಮಾಡಲು ನಡೆಸಿದ ಷಡ್ಯಂತ್ರವಾಗಿದೆ. ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಸುಟ್ಟ ನೋಟಿನ ವಿಡಿಯೋ ನೋಡಿ ನನಗೆ ಆಘಾತವಾಗಿದೆ’ ಎಂದಿದ್ದಾರೆ.
‘ಬೆಂಕಿ ಅವಘಡ ಸಂಭವಿಸಿದ್ದು ಮನೆಯ ಹಳೆಯ ಸಾಮಾನುಗಳನ್ನು ಸಂಗ್ರಹಿಟ್ಟಿದ್ದ ಔಟ್‌ಹೌಸ್‌ನಲ್ಲಿ. ನಾನಾಗಲಿ, ನನ್ನ ಕುಟುಂಬಸ್ಥರಾಗಲಿ ಯಾವುದೇ ನಗದು ಅಥವಾ ಕರೆನ್ಸಿಯನ್ನು ಸ್ಟೋರ್‌ರೂಂನಲ್ಲಿ ಯಾವತ್ತೂ ಸಂಗ್ರಹಿಸಿಟ್ಟಿಲ್ಲ. ನನ್ನ ಹಣದ ವಹಿವಾಟು ಬ್ಯಾಂಕಿನ ಮೂಲಕವೇ ನಡೆಯುತ್ತದೆ’ ಎಂದಿದ್ದಾರೆ‘ಸುಟ್ಟನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾಗಲಿ, ಆ ಸ್ಥಳದಲ್ಲಿ ನಗದು ಅಥವಾ ಕರೆನ್ಸಿ ಪತ್ತೆಯಾಗಿದ್ದನ್ನು ನಮಗೆ ತೋರಿಸಿಲ್ಲ’ ಎಂದು ಇದೇ ವೇಳೆ ಹೇಳಿದ್ದಾರೆ.
ಶುಕ್ರವಾರವಷ್ಟೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾ. ವರ್ಮಾ ಅವರ ವಿರುದ್ಧದ ತನಿಖೆಗೆ ತ್ರಿ ಸದಸ್ಯ ಸಮಿತಿಯೊಂದನ್ನು ರಚಿಸಿದ್ದಾರೆ.