‘ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆಯೇ ಬಿಹಾರದಲ್ಲಿ 125 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

 ಮೋತಿಹಾರಿ (ಬಿಹಾರ) : ‘ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆಯೇ ಬಿಹಾರದಲ್ಲಿ 125 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಗುರುವಾರವಷ್ಟೇ 125 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದರು. ಅದರ ಬೆನ್ನಲ್ಲೇ, ಮೋದಿಯವರೇ ತಮಗೆ ಮಾರ್ಗದರ್ಶನ ನೀಡಿದ್ದು ಎಂದು ಬಹಿರಂಗಪಡಿಸಿದ್ದಾರೆ. 

ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಮೋತಿಹಾರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ನಿತೀಶ್‌, ‘ಜನರು ಈಗ ವಿದ್ಯುತ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಪ್ರಧಾನಿ ಮೋದಿಯವರು ಸಲಹೆ ನೀಡಿದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಅವರನ್ನು ನಾವು ತುಂಬಾ ಗೌರವಿಸುತ್ತೇವೆ. ನಾವು ಕರೆದಾಗಲೆಲ್ಲ ಅವರು ಬಿಹಾರಕ್ಕೆ ಬರುತ್ತಾರೆ’ ಎಂದರು. 

ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪರೋಕ್ಷ ಟಾಂಗ್ ನೀಡಿದ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಗೆ ಅನುದಾನ ನೀಡಿರಲಿಲ್ಲ. ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳು ನಡೆದಿರಲಿಲ್ಲ’ ಎಂದು ಕಿಡಿ ಕಾರಿದರು.