ಸಾರಾಂಶ
ನವದೆಹಲಿ: ದೇಶದಲ್ಲಿ ಪದೇ ಪದೇ ಮಂದಿರ- ಮಸೀದಿ ವಿವಾದ ಸೃಷ್ಟಿಸುವುದರ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಸಾಧು- ಸಂತರಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಇಂಥ ಹೋರಾಟದ ಅಗತ್ಯದ ಕುರಿತು ಆರ್‌ಎಸ್‌ಎಸ್ ಧ್ವನಿ ಎತ್ತಿದೆ.
ಆರ್‌ಎಸ್‌ಎಸ್‌ನ ಮುಖವಾಣಿಯಾಗಿರುವ ಆರ್ಗನೈಸರ್‌ನಲ್ಲಿ ಬರೆದಿರುವ ಸಂಪಾದಕೀಯದಲ್ಲಿ ‘ಸೋಮನಾಥದಿಂದ ಸಂಭಲ್ ವರೆಗೆ, ಐತಿಹಾಸಿಕ ಸತ್ಯವನ್ನು ತಿಳಿದು ನಾಗರಿಕ ನ್ಯಾಯ ಪಡೆಯುವ ಹೋರಾಟವಾಗಿದೆ’ ಎಂದು ಹೇಳಿದೆ. ‘ಉತ್ತರಪ್ರದೇಶದ ಐತಿಹಾಸಿಕ ನಗರದಲ್ಲಿ, ಈಗ ಜಾಮಾ ಮಸೀದಿ ಇರುವ ಸ್ಥಳದಲ್ಲಿ ಶ್ರೀ ಹರಿಹರ ಮಂದಿರದ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಿಂದ ಶುರುವಾದ ವಿವಾದ, ಜನರಿಗೆ ಹಾಗೂ ಸಮುದಾಯಗಳಿಗೆ ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳ ಕುರಿತ ಚರ್ಚೆಗೆ ಅನುವು ಮಾಡಿದೆ. ಇದನ್ನು ಹಿಂದೂ ಮುಸ್ಲಿಂ ವಿವಾದಕ್ಕೆ ಸೀಮಿತವಾಗಿಸುವ ಬದಲು ಎಲ್ಲಾ ವರ್ಗಗಳನ್ನು ಒಳಗೊಂಡ ನಿಜವಾದ ಇತಿಹಾಸದ ಆಧಾರದಲ್ಲಿ ಚರ್ಚಿಸಬೇಕು’ ಎಂದು ಬರೆಯಲಾಗಿದೆ.
ಅಂತೆಯೇ, ಸೋಮನಾಥದಿಂದ ಸಂಭಲ್ ತನಕ ನಡೆಯುತ್ತಿರುವ ಸಂಘರ್ಷವು ಧಾರ್ಮಿಕ ಶ್ರೇಷ್ಠತೆಗಾಗಿ ಅಲ್ಲ. ಬದಲಿಗೆ, ನಮ್ಮ ರಾಷ್ಟ್ರೀಯ ಗುರುತನ್ನು ಪುನಃ ಧೃಡಪಡಿಸಿಕೊಂಡು ನಾಗರಿಕ ನ್ಯಾಯವನ್ನು ಹುಡುಕುವುದು ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.