ಇಂದಿನಿಂದ ಒಂದೇ ದಿನದಲ್ಲಿ ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರ್‌

| N/A | Published : Oct 04 2025, 01:00 AM IST

ಇಂದಿನಿಂದ ಒಂದೇ ದಿನದಲ್ಲಿ ಬ್ಯಾಂಕ್‌ಗಳಲ್ಲಿ ಚೆಕ್‌ ಕ್ಲಿಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಮುಂದೆ ಗ್ರಾಹಕರು ನೀಡಿದ ಚೆಕ್‌ ಕ್ಲಿಯರ್‌ ಆಗಲು ಎರಡು ದಿನ ಕಾಯಬೇಕಿಲ್ಲ. ಬದಲಾಗಿ ಅಂದು ನೀಡಿದ ಚೆಕ್‌ ಅಂದೇ ಕ್ಲಿಯರ್‌ ಆಗಲಿದೆ. ಚೆಕ್‌ ನೀಡಿದ ಕೆಲವೇ ಗಂಟೆಗಳಲ್ಲಿ ಹಣ ಪಾವತಿಯಾಗಲಿದೆ!

 ನವದೆಹಲಿ : ಇನ್ನು ಮುಂದೆ ಗ್ರಾಹಕರು ನೀಡಿದ ಚೆಕ್‌ ಕ್ಲಿಯರ್‌ ಆಗಲು ಎರಡು ದಿನ ಕಾಯಬೇಕಿಲ್ಲ. ಬದಲಾಗಿ ಅಂದು ನೀಡಿದ ಚೆಕ್‌ ಅಂದೇ ಕ್ಲಿಯರ್‌ ಆಗಲಿದೆ. ಚೆಕ್‌ ನೀಡಿದ ಕೆಲವೇ ಗಂಟೆಗಳಲ್ಲಿ ಹಣ ಪಾವತಿಯಾಗಲಿದೆ!

ಹೌದು, ಚೆಕ್‌ ಕ್ಲಿಯರೆನ್ಸ್‌ನಲ್ಲಿ ಆಗುತ್ತಿದ್ದ ವಿಳಂಬವನ್ನು ಪರಿಗಣಿಸಿ ಆರ್‌ಬಿಐ ಇದೀಗ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಬದಲಾವಣೆ 2 ಹಂತದಲ್ಲಿ ಜಾರಿಗೆ ಬರಲಿದೆ. ಮೊದಲ ಹಂತ ಅ.4ರಿಂದಲೇ ಜಾರಿಗೆ ಬರಲಿದ್ದು, ಅದರಂತೆ ಸಂಜೆ 7 ಗಂಟೆಯೊಳಗೆ ಚೆಕ್‌ ಅನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ಕ್ಲಿಯರ್‌ ಮಾಡಬೇಕು. ತಪ್ಪಿದಲ್ಲಿ ಸಹಜವಾಗಿಯೇ ಆ ಚೆಕ್‌ಗಳು ಸ್ವಯಂ ಆಗಿ ಸ್ವೀಕೃತವಾಗಿ ಹಣ ಪಾವತಿ ಆಗಲಿದೆ. 2ನೇ ಹಂತವು ಜ.3ರಿಂದ ಜಾರಿಗೆ ಬರಲಿದ್ದು, ಮೂರು ಗಂಟೆಯೊಳಗೆ ಚೆಕ್‌ಗಳನ್ನು ಸಂಬಂಧಿಸಿದ ಬ್ಯಾಂಕ್‌ಗಳು ಸ್ವೀಕೃತ ಅಥವಾ ತಿರಸ್ಕೃತ ಎಂದು ಖಚಿತಪಡಿಸಬೇಕಿದೆ.

ಹೇಗೆ ಕೆಲಸ ಮಾಡುತ್ತೆ?:

ಸದ್ಯ ಬ್ಯಾಂಕಿಂಗ್‌ ನೆಟ್‌ವರ್ಕ್‌ಗಳು ಚೆಕ್‌ ಟ್ರಂಕೇಷನ್‌ ಸಿಸ್ಟಂ(ಸಿಟಿಎಸ್‌) ಎಂಬ ಡಿಜಿಟಲ್‌ ವ್ಯವಸ್ಥೆ ಮೂಲಕ ಸಂಬಂಧಪಟ್ಟ ಬ್ಯಾಂಕ್‌ಗೆ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿ ಕಳುಹಿಸಿಕೊಡುತ್ತವೆ. ಬೆಳಗ್ಗಿನ ಬ್ಯಾಚ್‌, ಮಧ್ಯಾಹ್ನದ ಬ್ಯಾಚ್‌, ಸಂಜೆ ಬ್ಯಾಚ್‌ ಹೀಗೆ ಹಂತ ಹಂತವಾಗಿ ಚೆಕ್‌ಗಳನ್ನು ಗ್ರಾಹಕರು ಯಾವ ಬ್ಯಾಂಕಿನ ಚೆಕ್‌ ನೀಡಿದ್ದಾರೋ ಆ ಬ್ಯಾಂಕಿಗೆ ಕಳುಹಿಸಿಕೊಡಲಾಗುತ್ತದೆ. ಇದರಿಂದ ಚೆಕ್‌ಗಳ ಕ್ಲಿಯರಿಂಗ್‌ ಪ್ರಕ್ರಿಯೆ ವಿಳಂಬವಾಗುತ್ತಿತ್ತು.

ಇದಕ್ಕೆ ಪರಿಹಾರವಾಗಿ ಆರ್‌ಬಿಐ ಇದೀಗ ಸಿಟಿಎಸ್‌ ಅನ್ನು ನಿರಂತರ ಕ್ಲಿಯರಿಂಗ್‌ ವ್ಯವಸ್ಥೆಯಾಗಿ ರೂಪಾಂತರಗೊಳಿಸಿದೆ. ಇದರಡಿ ಬ್ಯಾಂಕ್‌ಗಳಿಗೆ ಚೆಕ್‌ ನೀಡಿದ ತಕ್ಷಣ ಅವುಗಳನ್ನು ಕ್ಲಿಯರೆನ್ಸ್‌ಗಾಗಿ ಕಳುಹಿಸಲಾಗುತ್ತದೆ. ಈ ಕಾರ್ಯ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಿರಂತರವಾಗಿ ನಡೆಯುತ್ತದೆ. ಪ್ರತಿ ಒಂದು ಗಂಟೆಗೊಮ್ಮೆ ಚೆಕ್‌ಗಳಿಗೆ ಸಂಬಂಧಿಸಿದ ಹಣದ ಸೆಟಲ್‌ಮೆಂಟ್‌ ಆಗುತ್ತದೆ. ಅಂದರೆ ಕೆಲವೇ ಗಂಟೆಗಳಲ್ಲಿ ಚೆಕ್‌ ಕ್ಲಿಯರ್‌ ಆಗಲಿದ್ದು, ಕೆಲವೇ ಗಂಟೆಗಳಲ್ಲಿ ಹಣ ಪಾವತಿಯಾಗುತ್ತದೆ.

ಈ ಹೊಸ ವ್ಯವಸ್ಥೆ ಜಾರಿಯಾದ ಬಳಿಕ ಚೆಕ್‌ ನೀಡುವವರು ತಮ್ಮ ಖಾತೆಯಲ್ಲಿ ಅಗತ್ಯದಷ್ಟು ಹಣ ಇರುವಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಚೆಕ್‌ ಬೌನ್ಸ್ ಆಗುವ ಅಪಾಯ ಎದುರಾಗಲಿದೆ ಎಂದು ಬ್ಯಾಂಕ್‌ಗಳು ಎಚ್ಚರಿಕೆಯನ್ನೂ ನೀಡಿವೆ.

Read more Articles on