ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೂ(ಐಆರ್‌ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್‌ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡಕ್ಷನ್‌ ಸ್ಟೌವ್‌ ಬಳಸಲು ನಿರ್ಧರಿಸಿದೆ.

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೂ(ಐಆರ್‌ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್‌ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡಕ್ಷನ್‌ ಸ್ಟೌವ್‌ ಬಳಸಲು ನಿರ್ಧರಿಸಿದೆ. ಪ್ರತಿನಿತ್ಯ 1400 ರೈಲುಗಳಲ್ಲಿ 17 ಲಕ್ಷ ಊಟವನ್ನು ಪೂರೈಸಲಾಗುತ್ತಿದೆ. ಆದರೆ ಯುದ್ಧ ಹಿನ್ನೆಲೆ ದಿನಕ್ಕೆ 1000 ಸಿಲಿಂಡರ್‌ ನೆಚ್ಚಿಕೊಂಡಿದ್ದ ಐಆರ್‌ಸಿಟಿಸಿಗೆ ಇದರಿಂದ ಹೊಡೆತ ಬಿದ್ದಿದೆ. ಹೀಗಾಗಿ ಪರ್ಯಾಯ ಆಯ್ಕೆಯ ಮೊರೆ ಹೋಗಿದೆ. ಈಗಾಗಲೇ ಶೇ.60ರಷ್ಟು ರೈಲುಗಳಲ್ಲಿ ಇಂಡಕ್ಷನ್‌ಗಳಲ್ಲಿ ಅಡುಗೆ ಮಾಡುವ ವ್ಯವಸ್ಥೆ ಜಾರಿಯಾಗಿದೆ.

==

ಕೊಲ್ಲಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: 3 ಭಾರತೀಯರು ಕಣ್ಮರೆ

ಮಸ್ಕತ್‌: ಒಮಾನ್‌ ರಾಷ್ಟ್ರದಲ್ಲಿ ಮಂಗಳವಾರ ಕರ್ನಾಟಕದ ಕಾರವಾರದಿಂದ ಹೊರಟಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇದೀಗ ಮತ್ತೊಂದು ಹಡಗಿನ ಮೇಲೆ ದಾಳಿಯಾಗಿದೆ. ಪಲಾವ್‌ ದೇಶದ ಧ್ವಜ ಹೊಂದಿದ್ದ ಸೆಟ್ಟೆಬೆಲ್ಲೊ ಮೇಲೆ ಹೋರ್ಮುಜ್‌ ಬಳಿ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ಹಡಗಿನಲ್ಲಿ 24 ಭಾರತೀಯರು ಸೇರಿದಂತೆ 28 ಮಂದಿಯಿದ್ದರು. ಆದರೆ ಅವಘಢದಲ್ಲಿ ಮೂವರು ಭಾರತೀಯರು ಕಣ್ಮರೆಯಾಗಿದ್ದಾರೆ. ಈ ಬಗ್ಗೆ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು ‘ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದಿದೆ.

==

2025ರಲ್ಲಿ 65 ಯುದ್ಧ: 2ನೇ ವಿಶ್ವ ಸಮರದ ಬಳಿಕದ ಅತಿ ಹೆಚ್ಚು

ನವದೆಹಲಿ: 1945ರಲ್ಲಿ ನಡೆದ ಎರಡನೇ ಮಹಾಯುದ್ಧದ ಬಳಿಕ 2025ರಲ್ಲಿಯೇ ಜಗತ್ತಿನಲ್ಲಿ ಹೆಚ್ಚು ಯುದ್ಧಗಳು ನಡೆದಿವೆ. ಇದು ಶೀತಲ ಸಮರ ಕೊನೆಗೊಂಡ ಬಳಿಕ ಅತ್ಯಂತ ಅಪಾಯಕಾರಿ ವರ್ಷವಾಗಿತ್ತು ಎಂದು ಓಸ್ಲೋ ಶಾಂತಿ ಸಂಶೋಧನಾ ಸಂಸ್ಥೆ (ಪಿಆರ್‌ಐಒ) ವರದಿ ಹೇಳಿದೆ. ‘ಸಂಘರ್ಷ ಪ್ರವೃತ್ತಿ’ ಹೆಸರಿನಲ್ಲಿ ಪಿಆರ್‌ಐಒ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ 2025ರಲ್ಲಿ 65 ಯುದ್ಧಗಳು ನಡೆದಿದೆ. ಇದು ಕಳೆದ 80 ವರ್ಷಗಳಲ್ಲಿಯೇ ಅತ್ಯಧಿಕ. ಮಾತ್ರವಲ್ಲದೇ ದೇಶಗಳ ನಡುವಿನ ಸಂಘರ್ಷವು 8 ದಶಕದಲ್ಲಿ ದುಪ್ಪಟ್ಟಾಗಿದ್ದು, 8ಕ್ಕೆ ಏರಿಕೆಯಾಗಿದೆ ಎಂದು ಅದು ವರದಿ ನೀಡಿದೆ.65 ಸಂಘರ್ಷಗಳ ಪಟ್ಟಿಯಲ್ಲಿ ಭಾರತ- ಪಾಕಿಸ್ತಾನ, ಇಸ್ರೇಲ್‌- ಇರಾನ್‌, ಅಫ್ಘಾನಿಸ್ತಾನ- ಪಾಕ್‌, ಕಾಂಬೋಡಿಯಾ- ಥಾಯ್ಲೆಂಡ್‌, ರಷ್ಯಾ- ಉಕ್ರೇನ್‌, ಇಸ್ರೇಲ್‌ ಗಾಜಾ ಮತ್ತು ಸಿರಿಯಾ ನಡೆಸಿದ ದಾಳಿಗಳೂ ಸೇರಿವೆ. ಈ ಅವಧಿಯಲ್ಲಿ ಯುದ್ಧ ಮತ್ತು ರಾಜಕೀಯ ಹಿಂಸಾಚಾರದಿಂದ 2,45,000 ಮಂದಿ ಸಾವನ್ನಪ್ಪಿದ್ದಾರೆ. 2024ರಲ್ಲಿ ಈ ಸಂಖ್ಯೆ ಕೇವಲ 14,200 ಮಾತ್ರವೇ ಇತ್ತು ಎಂದು ವರದಿ ಹೇಳಿದೆ. ಇನ್ನು ಈ ಸಂಶೋಧನೆ ಪ್ರಕಾರ ಕಳೆದ ವರ್ಷ ಏಷ್ಯಾ, ಮಧ್ಯಪ್ರಾಚ್ಯ, ಯುರೋಪ್‌ ದೇಶಗಳು ಹೆಚ್ಚು ಬಾಧಿತವಾಗಿವೆ.

==

₹23000 ಕೋಟಿ ವೆಚ್ಚದಲ್ಲಿ ಆರ್ಟಿಲರಿ ಗನ್‌ ಖರೀದಿಗೆ ಕೇಂದ್ರಕ್ಕೆ ಸೇನೆ ಪ್ರಸ್ತಾವ

ನವದೆಹಲಿ: ಭಾರತೀಯ ಸೇನೆಯು ದಕ್ಷಿಣ ಕೊರಿಯಾದಿಂದ ಹೆಚ್ಚುವರಿ 300 ‘ಕೆ9 ವಜ್ರ’ ಸ್ವಯಂಚಾಲಿತ ಆರ್ಟಿಲರಿ ಗನ್‌ಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಒಪ್ಪಂದದ ವೆಚ್ಚ ಸುಮಾರು 23,000 ಕೋಟಿ ರು. ಆಗುತ್ತದೆ. ಇದಕ್ಕೆ ಅನುಮೋದನೆ ದೊರೆತರೆ, ಇದು ಸೈನ್ಯದ ಇತ್ತೀಚಿನ ಅತಿ ದೊಡ್ಡ ಆರ್ಟಿಲರಿ ಖರೀದಿಗಳಲ್ಲಿ ಒಂದಾಗಲಿದೆ. ಪ್ರಸ್ತಾವನೆಯನ್ನು ಈ ವಾರ ಡಿಫೆನ್ಸ್ ಪ್ರೊಕ್ಯುರ್‌ಮೆಂಟ್ ಬೋರ್ಡ್ (ಡಿಪಿಬಿ) ಮುಂದೆ ಇಡಲಾಗುವ ಸಾಧ್ಯತೆ ಇದೆ. ಈ ಗನ್‌ಗಳು ಸುಮಾರು 40 ಕಿ.ಮೀ.ಗಿಂತಲೂ ಹೆಚ್ಚು ದೂರದ ಗುರಿ ತಲುಪಬಲ್ಲವು. ಮರುಭೂಮಿ ಮತ್ತು ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಖರೀದಿಗೆ ಒಪ್ಪಿಗೆ ಸಿಕ್ಕರೆ, ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸೇನೆಯ ಶಕ್ತಿ ಮತ್ತಷ್ಟು ಹೆಚ್ಚಲಿದೆ.ಕೆ9 ವಜ್ರ ಗನ್‌ಗಳನ್ನು ದಕ್ಷಿಣ ಕೊರಿಯಾದ ಹನ್ವಾ ಏರೋಸ್ಪೇಸ್‌ನಲ್ಲಿ ನಿರ್ಮಿಸಲಾಗುತ್ತದೆ. ಹನ್ವಾದ ಸಹಭಾಗಿತ್ವದಲ್ಲಿ ಭಾರತದಲ್ಲಿ ಲಾರ್ಸನ್ & ಟುಬ್ರೋ ಕಂಪನಿ ಇವನ್ನು ತಯಾರಿಸುತ್ತದೆ. ಈಗಾಗಲೇ ಸೈನ್ಯದ ಬಳಿ 100 ಗನ್‌ಗಳಿವೆ. ಇನ್ನೂ 100 ಗನ್‌ಗಳ ಖರೀದಿಗೆ ಈಗಾಗಲೇ ಅನುಮತಿ ದೊರೆತಿದೆ.

==

ಇಂದು ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 11ನೇ ಸಭೆ

ಕರ್ನಾಟಕ ಸಿಎಂ ಡಿಕೆಶಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ದೆಹಲಿಯಲ್ಲಿ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.ಪ್ರಧಾನಿ ಮೋದಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವರ್ಷದ ಸಭೆಯು ‘ಸಮಗ್ರ ಮಾನವ ಅಭಿವೃದ್ಧಿ’ ಮೇಲೆ ಕೇಂದ್ರೀಕೃತವಾಗಿರುತ್ತದೆ. ಸಭೆಯಲ್ಲಿ ಅಭಿವೃದ್ಧಿ ವಿಚಾರ, ನೀತಿ ನಿರೂಪಣೆ, ಮೂಲಸೌಕರ್ಯ ಅಭಿವೃದ್ಧಿ, ಸಹಕಾರ ಒಕ್ಕೂಟ ವ್ಯವಸ್ಥೆ, ಅನುದಾನ, ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ. ಜತೆಗೆ, ರಾಜ್ಯಗಳ ಅಭಿವೃದ್ಧಿ ಯೋಜನೆಗಳು, ಅನುದಾನದ ಅಗತ್ಯತೆ, ಕೇಂದ್ರದ ನೆರವಿನ ಬಗ್ಗೆ ರಾಜ್ಯಗಳು ಬೇಡಿಕೆ ಇಡುತ್ತವೆ.