ಕನ್ನಡಪ್ರಭ ವಾರ್ತೆ ಮೈಸೂರು

ಪೆಟ್ರೋಲಿಯಂ ಉತ್ಪನ್ನಗಳಿಗೆ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಭಾರತ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಕೊರತೆ ಎದುರಿಸುತ್ತಿರುವ ಈ ವೇಳೆ ಮೈಸೂರಿನ ಪ್ರವೀಣ್‌ ಕುಮಾರ್‌ ಮಾವಿನಕಾಡು ಅವರು ಸೋಲಾರ್‌ ಸ್ಟೌವ್ ಆವಿಷ್ಕರಿಸಿದ್ದಾರೆ.

ಸ್ವಚ್ಛ ಮತ್ತು ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಮೈಸೂರು ಮೂಲದ ಸನ್‌ ಪ್ರೀತ್‌ ಸಸ್ಟೈನೆಬಲ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿ. ಸಂಸ್ಥೆ ಸನ್‌ಪ್ರೀತ್‌ ಸೋಲಾರ್‌+ ಎಂಬ ಸೋಲಾರ್ ಇಂಡಕ್ಷನ್ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ ಸೂರ್ಯನ ಶಕ್ತಿಯನ್ನು ಎಸಿ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರೂ ಹೊತ್ತಿನ ಅಡುಗೆ ಮಾಡಲು ನೆರವಾಗುತ್ತದೆ.

ಈ ತಂತ್ರಜ್ಞಾನ ಅಳವಡಿಸಿಕೊಂಡರೆ ಎಲ್‌.ಪಿ.ಜಿ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಗೃಹ ಬಳಕೆಯ ಅಡುಗೆ ವೆಚ್ಚವನ್ನೂ ತಗ್ಗಿಸಬಹುದು. ಅದಕ್ಕಿಂತ ಮುಖ್ಯವಾಗಿ, ಇದು ಪರಿಸರ ಸ್ನೇಹಿ ಅಡುಗೆ ಪದ್ಧತಿಯನ್ನು ಉತ್ತೇಜಿಸುತ್ತದೆ. ಇವು ಭವಿಷ್ಯದ ಪೀಳಿಗೆಗಳಿಗೆ ಸುಸ್ಥಿರ ಮತ್ತು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಗತ್ಯ ಹೆಜ್ಜೆಯಾಗಿದೆ.

ಸ್ಟಾರ್ಟ್‌ಅಪ್ ಇಂಡಿಯಾ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಎಂ.ಕೆ. ಪ್ರವೀಣ್ ಕುಮಾರ್ ಅವರು ಈ ಹಿಂದೆ ಅಭಿವೃದ್ಧಿಪಡಿಸಿದ್ದ ಇಟಿಸಿ ಆಧಾರಿತ ಸೋಲಾರ್ ಅಡುಗೆ ಉಪಕರಣ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಟಾಪ್- 12 ತಂತ್ರಜ್ಞಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿತ್ತು.


ಕಳೆದ ಒಂದು ದಶಕದಿಂದಲೂ ಸೋಲಾರ್ ಅಡುಗೆ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಪ್ರವೀಣ್ ಕುಮಾರ್ ಅವರು, ಇಂತಹ ಸೌರ ಆಧಾರಿತ ಅಡುಗೆ ತಂತ್ರಜ್ಞಾನವನ್ನು ವಿಶಾಲ ಮಟ್ಟದಲ್ಲಿ ಅಳವಡಿಸಿಕೊಂಡರೆ ಅದು ಭಾರತದ ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಹಾಗೂ ಸ್ವಾವಲಂಬಿ ಮತ್ತು ಸುಸ್ಥಿರ ಅಡುಗೆ ವ್ಯವಸ್ಥೆ ನಿರ್ಮಾಣದತ್ತ ಮಹತ್ವದ ಹೆಜ್ಜೆ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವ ಪರಿಸರ ದಿನಾಚರಣೆ 2026ರ ಈ ಸಂದರ್ಭದಲ್ಲಿ ಸ್ವಚ್ಛ ಇಂಧನ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಜೀವನಶೈಲಿ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಮತ್ತಷ್ಟು ಮಹತ್ವ ಪಡೆದುಕೊಂಡಿವೆ. ಈ ಸಮಯದಲ್ಲಿ ಇತ್ತೀಚಿನ ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ಹಾಗೂ ಯುದ್ಧ ಪರಿಸ್ಥಿತಿಯು ಭಾರತವು ಆಮದು ಮಾಡಿಕೊಳ್ಳುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅತಿಯಾದ ಅವಲಂಬನೆಯನ್ನು ಮತ್ತೊಮ್ಮೆ ಜಗಜ್ಜಾಹೀರುಪಡಿಸಿದೆ.

ಯುದ್ಧದ ನಂತರ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ಏರಿಳಿತ ಉಂಟಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್‌.ಪಿ.ಜಿ ಸಿಲಿಂಡರ್ ದರಗಳು ಮತ್ತಷ್ಟು ಏರಿಕೆಯಾಗುವ ಭೀತಿ ಸಾರ್ವಜನಿಕರಲ್ಲಿ ಮೂಡಿತು. ವಿಶೇಷವಾಗಿ ಕರ್ನಾಟಕದಲ್ಲಿ ಎಲ್‌.ಪಿ.ಜಿ ಸಿಲಿಂಡರ್‌ ಗಳು, ಎಲೆಕ್ಟ್ರಿಕ್ ಇಂಡಕ್ಷನ್ ಸ್ಟವೌ ಹಾಗೂ ಪರ್ಯಾಯ ಅಡುಗೆ ಉಪಕರಣಗಳ ‘ಖರೀದಿ’ ನಡೆದಿರುವ ಬಗ್ಗೆ ವ್ಯಾಪಕ ಚರ್ಚೆಗಳು ಕೇಳಿಬಂದವು.

ಹೋಟೆಲ್, ಕಲ್ಯಾಣ ಮಂಟಪ ಮುಂತಾದ ಕಡೆ ಬಳಸುವ ವಾಣಿಜ್ಯ ಬಳಕೆಯ ಸಿಲಿಂಡರ್‌ ಗಳು ಕಾಳಸಂತೆಯಲ್ಲಿ ಎರಡು ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದರ ಕುರಿತೂ ಸುದ್ದಿ ಹರಿದಾಡಿದೆ. ಭಾರತ ತನ್ನ ಕಚ್ಚಾ ತೈಲ ಮತ್ತು ಎಲ್‌.ಪಿ.ಜಿ ಅವಶ್ಯಕತೆಗಳ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯಾವುದೇ ಒಂದು ಸಣ್ಣ ಅಸ್ಥಿರತೆ ಉಂಟಾದರೂ ಅದು ನೇರವಾಗಿ ಭಾರತದ ಇಂಧನ ಬೆಲೆ ಮತ್ತು ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಇರಾನ್- ಅಮೆರಿಕಾ ಸಂಘರ್ಷದ ನಂತರ ಉಂಟಾದ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನ ಉಂಟಾಗಿದ್ದಕ್ಕೂ ಕೂಡ ಇದೇ ಪ್ರಮುಖ ಕಾರಣ. ಕಳೆದ ಕೆಲವು ವರ್ಷಗಳಿಂದ ಗೃಹ ಬಳಕೆಯ ಎಲ್‌.ಪಿಜಿ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ. ಕರ್ನಾಟಕದ ಹಲವೆಡೆ ಜನರು ಕಡಿಮೆ ವೆಚ್ಚದ ಹಾಗೂ ವಿಶ್ವಾಸಾರ್ಹ ಪರ್ಯಾಯಗಳ ಹುಡುಕಾಟದಲ್ಲಿ ಇಂಡಕ್ಷನ್ ಸ್ಟೌವ್‌ ಮತ್ತು ಇತರ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳ ಖರೀದಿಗೆ ಮುಂದಾಗಿದ್ದಾರೆ. ಇದು ತಾತ್ಕಾಲಿಕವಾಗಿ ಸಮಸ್ಯೆ ನಿವಾರಿಸಿದಂತೆ ಕಂಡರೂ, ಬರುವ ದಿನಗಳಲ್ಲಿ ವಿದ್ಯುತ್ ಜಾಲದ ಮೇಲಿನ ಒತ್ತಡ ಹೆಚ್ಚಾಗುವುದು ನಿಸ್ಸಂಶಯ. ಹೀಗಾಗಿ ಸೋಲಾರ್ ಆಧಾರಿತ ಇಂಡಕ್ಷನ್ ಸ್ಟವೌ ಭಾರತದ ಭವಿಷ್ಯವಾಗಿ ಕಾಣಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸಾರ್ವಜನಿಕರಿಗೆ ಆಮದು ಪೆಟ್ರೋಲಿಯಂ ಉತ್ಪನ್ನಗಳ ಅನಗತ್ಯ ಬಳಕೆ ಕಡಿಮೆ ಮಾಡಲು ಮತ್ತು ಇಂಧನ ಉಳಿತಾಯ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆ ಉತ್ತೇಜಿಸುವುದನ್ನೂ ಕೇಂದ್ರ ಸರ್ಕಾರ ತನ್ನ ದೀರ್ಘಕಾಲೀನ ನೀತಿಯಾಗಿ ಮುಂದಿಟ್ಟಿದೆ.

ವಿಶ್ವ ಪರಿಸರ ದಿನಾಚರಣೆ ನಮಗೆ ಪರಿಸರ ಸಂರಕ್ಷಣೆ ಮತ್ತು ಇಂಧನ ಭದ್ರತೆ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ನೆನಪಿಸುತ್ತದೆ. ಇಂಧನಗಳ ಮೇಲಿನ ಅತಿಯಾದ ಅವಲಂಬನೆ ದೇಶದ ಇಂಧನ ಸ್ವಾವಲಂಬನೆಯನ್ನು ದುರ್ಬಲಗೊಳಿಸುವುದರ ಜೊತೆಗೆ ವಾಯು ಮಾಲಿನ್ಯ, ಹಸಿರುಮನೆ ಅನಿಲಗಳ ಹೆಚ್ಚಳ ಹಾಗೂ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಅಡುಗೆ ತಂತ್ರಜ್ಞಾನ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಸ್ಥಿರತೆಗೆ ಪ್ರಮುಖ ಪರಿಹಾರವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.