ಕನ್ನಡಪ್ರಭ ವಾರ್ತೆ ಕೋಲಾರದಿನೇ ದಿನೇ ಹೆಚ್ಚುತ್ತಿರುವ ಬೆಲೆ ಏರಿಕೆಯ ನಡುವೆಯೇ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ ಮತ್ತೊಮ್ಮೆ ಹೆಚ್ಚಿದೆ. ಪರಿಣಾಮವಾಗಿ ಶ್ರೀನಿವಾಸಪುರ ಪಟ್ಟಣದಲ್ಲಿ ೧೪.೨ ಕೆ.ಜಿ. ಗೃಹಬಳಕೆಯ ಸಿಲಿಂಡರ್ ದರ ೯೫೫ ಕ್ಕೆ ತಲುಪಿದ್ದು, ಸಾಮಾನ್ಯ ಜನರು, ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯದ ಕುಟುಂಬಗಳಲ್ಲಿ ಆತಂಕ ಉಂಟಾಗಿದೆ.ಕಳೆದ ಕೆಲ ವರ್ಷದಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಕುಟುಂಬಗಳ ಮಾಸಿಕ ಖರ್ಚು ಗಣನೀಯವಾಗಿ ಹೆಚ್ಚಾಗಿದೆ. ಜೀವನ ನಿರ್ವಹಣೆ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದ್ದು, ಜನಸಾಮಾನ್ಯರು ಆರ್ಥಿಕ ಒತ್ತಡ ಎದುರಿಸುತ್ತಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸಪುರ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ಅಲ್ಪಸಂಖ್ಯಾತರ ಮುಖಂಡ ಶಬ್ಬೀರ್ ಅಹ್ಮದ್, ಗೃಹಬಳಕೆಯ ಅನಿಲ ಸಿಲಿಂಡರ್ ದರದಲ್ಲಿ ಆಗಿರುವ ಏರಿಕೆ ಸಾಮಾನ್ಯ ಜನರು, ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಭಾರವಾಗಿದೆ ಎಂದರು.ಕೃಷಿ ಕ್ಷೇತ್ರವೂ ಈ ಬೆಲೆ ಏರಿಕೆಯಿಂದ ತೀವ್ರವಾಗಿ ಬಾಧಿತವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಲಾಭ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿ ಆರ್ಥಿಕತೆ ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ಆಗ್ರಹಿಸಿದರು.ಸಾರ್ವಜನಿಕ ವಲಯದಲ್ಲಿಯೂ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬಗಳ ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬೆಲೆ ಸ್ಥಿರತೆಗಾಗಿ ಸರ್ಕಾರ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.