ಸಾರಾಂಶ
ಜೆನ್ ಝೀ ಹಿಂಸಾಚಾರಕ್ಕೆ ನಲುಗಿದ್ದ ನೇಪಾಳದಲ್ಲಿ ಇದೀಗ ಮತ್ತೆ ಯುವಕರು ಉದ್ರಿಕ್ತರಾಗಿದ್ದಾರೆ. ಸರ್ಕಾರ ವಿರೋಧಿ ಪ್ರತಿಭಟನೆಗೆ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪಕ್ಷದವರು ಸಿದ್ಧತೆ ನಡೆಸುತ್ತಿದ್ದ ಸುದ್ದಿ ತಿಳಿದು, ಸರ್ಕಾರ ಪತನಕ್ಕೆ ಕಾರಣವಾಗಿದ್ದ ಯುವಕರು ಸಂಘರ್ಷಕ್ಕಿಳಿದಿದ್ದಾರೆ.
ಕಾಠ್ಮಂಡು: ಕಳೆದ ಸೆಪ್ಟೆಂಬರ್‌ನಲ್ಲಿ ಜೆನ್ ಝೀ ಹಿಂಸಾಚಾರಕ್ಕೆ ನಲುಗಿದ್ದ ನೇಪಾಳದಲ್ಲಿ ಇದೀಗ ಮತ್ತೆ ಯುವಕರು ಉದ್ರಿಕ್ತರಾಗಿದ್ದಾರೆ. ಸರ್ಕಾರ ವಿರೋಧಿ ಪ್ರತಿಭಟನೆಗೆ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪಕ್ಷದವರು ಸಿದ್ಧತೆ ನಡೆಸುತ್ತಿದ್ದ ಸುದ್ದಿ ತಿಳಿದು, ಆ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಯುವಕರು ಸಂಘರ್ಷಕ್ಕಿಳಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಗುರುವಾರ ಮಧ್ಯಾಹ್ನದಿಂದ ರಾತ್ರಿ ವರೆಗೆ ಕರ್ಫ್ಯೂ ವಿಧಿಸಲಾಗಿದೆ.
2026ರಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆ
2026ರಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಒಲಿ ಅವರ ಸಿಪಿಎನ್-ಯುಎಂಎಲ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶಂಕರ್ ಪೊಖಾರೆಲ್ ಅವರು ಸಿಮಾರಾದಲ್ಲಿ ನಡೆಯಲಿದ್ದ ಸರ್ಕಾರ ವಿರೋಧಿ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ತಿಳಿದ ಯುವಕರ ಗುಂಪು ಬುಧವಾರ ಕಾಠ್ಮಂಡು ವಿಮಾನ ನಿಲ್ದಾಣ ತಲುಪಿದ್ದು, ಅಲ್ಲಿ ಒಲಿ ಬೆಂಬಲಿಗರೊಂದಿಗೆ ಸಂಘರ್ಷ ಏರ್ಪಟ್ಟಿದೆ. ಅತ್ತ ಸಿಮಾರಾದಲ್ಲಿ, ಶಂಕರ್ ಬರುತ್ತಿದ್ದ ವಿಮಾನ ಇಳಿಯದಂತೆಯೂ ಯುವಕರು ತಡೆಗಟ್ಟಿದ್ದರು.ಪೊಲೀಸರು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಮತ್ತೆ ಗುರುವಾರ ಜೆನ್ ಝೀಗಳು ಬೀದಿಗಿಳಿದಿದ್ದಾರೆ. ಈ ವೇಳೆ ಹಿಂಸೆ ಮಿತಿಮೀರಿದ್ದು, 10 ಮಂದಿಗೆ ಗಾಯಗಳಾಗಿವೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಉದ್ವಿಗ್ನತೆಯನ್ನು ಹತ್ತಿಕ್ಕಲು ಯತ್ನಿಸಿದರು.
ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಕರ್ಫ್ಯೂ
ಅಹಿತಕರ ಘಟನೆ ನಡೆಯದಂತೆ ಸ್ಥಳೀಯಾಡಳಿತ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಕರ್ಫ್ಯೂ ವಿಧಿಸಿ, ಸಭೆಗಳನ್ನು ನಡೆಸಲು ನಿರ್ಬಂಧ ವಿಧಿಸಿದೆ. ಇನ್ನು ಈ ಬೆನ್ನಲ್ಲೇ ಪ್ರಧಾನಿ ಸುಶೀಲಾ ಕಾರ್ಕಿ ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್ ಝೀ ಗಲಭೆಯಿಂದಾಗಿ ಒಲಿ ಸರ್ಕಾರ ಉರುಳಿತ್ತು. 76 ಮಂದಿ ಸಾವನ್ನಪ್ಪಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))