ಸಾರಾಂಶ
ನವದೆಹಲಿ: ಭಾರತದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದಡಿ ಬಂಧಿಸಲ್ಪಟ್ಟು ತನಿಖೆಗೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನ ಹಾಗೂ ಅಲ್ಲಿನ ಅಧಿಕಾರಿಗಳೊಂದಿಗೆ ಇರುವ ನಂಟುಗಳು ಬಗೆದಷ್ಟೂ ಬಯಲಾಗುತ್ತಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಅಧಿಕಾರಿ ಅಲಿ ಹಸನ್ ಎಂಬಾತನೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದು, ಇಬ್ಬರ ನಡುವಿನ ಸಂಭಾಷಣೆಗಳು ಈಗ ಬೆಳಕಿಗೆ ಬಂದಿದೆ. ಅಲಿ ಜತೆ ವಾಟ್ಸ್‌ಅಪ್‌ನಲ್ಲಿ ಚ್ಯಾಟ್ ಮಾಡುತ್ತಿದ್ದ ಜ್ಯೋತಿ, ‘ನನ್ನ ಮದುವೆಯನ್ನು ಪಾಕಿಸ್ತಾನದಲ್ಲಿ ಮಾಡಿಸು’ ಎಂದು ಕೇಳಿಕೊಂಡಿದ್ದಳು ಎಂದು ವರದಿಯಾಗಿದೆ.
ಈ ಮೂಲಕ ಆಕೆಯ ಪಾಕ್ ಪ್ರೇಮ ಬಯಲಾಗಿದೆ. 2023ರಿಂದಲೂ ಜ್ಯೋತಿ ಆತನ ಸಂಪರ್ಕದಲ್ಲಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಅಂತೆಯೇ, ಅವರಿಬ್ಬರು ಭಾರತದ ರಹಸ್ಯ ಕಾರ್ಯಾಚರಣೆಗಳ ಬಗ್ಗೆಯೂ ರಹಸ್ಯ ಭಾಷೆಯಲ್ಲಿ (ಕೋಡ್ ಮೂಲಕ) ಚರ್ಚಿಸುತ್ತಿದ್ದರು ಎಂದು ತಿಳಿದುಬಂದಿದೆ. ಜತೆಗೆ, ಜ್ಯೋತಿಗೆ ಸೇರಿದ 4 ಬ್ಯಾಂಕ್ ಖಾತೆಗಳ ವಿವರ ಪೊಲೀಸರ ಕೈ ಸೇರಿದ್ದು, ಒಂದು ಖಾತೆಯ ಮೂಲಕ ದುಬೈನಿಂದ ವಹಿವಾಟು ನಡೆದದ್ದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಆಕೆ ಎಲ್ಲಿಂದ ಹಣ ಪಡೆಯುತ್ತಿದ್ದಳು ಎಂಬುದರ ಪತ್ತೆಗೆ ತನಿಖೆ ಮುಂದುವರೆದಿದೆ. ಈವರೆಗೆ ಜ್ಯೋತಿ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿಬಂದಿದ್ದು, ಭಾರತದಲ್ಲಿರುವ ಪಾಕ್ ದೂತಾವಾಸದ ಅಧಿಕಾರಿಯೊಂದಿಗೂ ಸಂಪರ್ಕದಲ್ಲಿದ್ದಳು.