ಸಲ್ಮಾನ್‌ ಖಾನ್‌ಗೆ ಪಕ್ಕೆಲುಬಿನ ನೋವು : ಕಾರ್ಯಕ್ರಮವೊಂದರ ವೇಳೆ ಎದ್ದೇಳಲು ಪರದಾಟ

| Published : Aug 30 2024, 01:07 AM IST / Updated: Aug 30 2024, 04:41 AM IST

ಸಾರಾಂಶ

ನಟ ಸಲ್ಮಾನ್‌ ಖಾನ್‌ ಅವರು ಕಾರ್ಯಕ್ರಮವೊಂದರಲ್ಲಿ ನೋವಿನಿಂದ ನರಳುತ್ತಿರುವ ಮತ್ತು ಎದ್ದೇಳಲು ಕಷ್ಟಪಡುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಚಿತ್ರೀಕರಣದ ವೇಳೆ ಗಾಯವಾಗಿದೆ ಎನ್ನಲಾಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈ: ಕಾರ್ಯಕ್ರಮವೊಂದರ ವೇಳೆ ನಟ ಸಲ್ಮಾನ್‌ ಖಾನ್ (58) ಕುಳಿತಲ್ಲಿಂದ ಏಳಲು ಆಗದೆ ಕಷ್ಟಪಡುತ್ತಿರುವ ಹಾಗೂ ತಮ್ಮ ಪಕ್ಕೆಲುಬನ್ನು ಮುಟ್ಟಿದಾಗ ನೋವಿನಿಂದ ನರಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸ್ವಚ್ಛ ಹಾಗೂ ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ‘ಬಚ್ಚೆ ಬೋಲೆ ಮೋರಯಾ’ ಕಾರ್ಯಕ್ರಮದಲ್ಲಿ ಸಲ್ಮಾನ್‌ ತಮ್ಮ ಪಕ್ಕೆಲುಬಿನ ಬಲಬದಿ ಮುಟ್ಟಿಕೊಂಡು ನೋವಿನಿಂದ ನರಳಿದ್ದು ಕಂಡುಬಂದಿದೆ. ಇನ್ನೊಂದು ವಿಡಿಯೋದಲ್ಲಿ ಅವರು ಕುಳಿತಲ್ಲಿಂದ ಏಳಲು ಪರದಾಡುವುದನ್ನು ಕಾಣಬಹುದು.

ಪ್ರಸ್ತುತ ಸಿಕಂದರ್‌ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿರುವ ಸಲ್ಮಾನ್‌ಗೆ ಸೆಟ್‌ನಲ್ಲಿ ಗಾಯವಾಗಿರಬಹುದು ಎಂದು ಹೇಳಲಾಗಿದೆ. ಇದರಿಂದ ಕಳವಳಗೊಂಡಿರುವ ಅಭಿಮಾನಿಗಳು, ‘ಭಾಯಿ, ನಿಮ್ಮ ಆರೋಗ್ಯ ಹಾಗೂ ಸಂತೋಷ ಬಹಳ ಮುಖ್ಯ. ಬೇಗ ಗುಣಮುಖರಾಗಿ’ ಎಂದು ಹಾರೈಸಿದ್ದಾರೆ.

==

ಸ್ಪೈಸ್‌ಜೆಟ್‌ಗೆ ಮತ್ತೆ ಆರ್ಥಿಕ ಸಂಕಷ್ಟ: ಸಂಸ್ಥೆ ಮೇಲೆ ಕೇಂದ್ರ ಸರ್ಕಾರದ ನಿಗಾ

ನವದೆಹಲಿ: ಈ ಹಿಂದೊಮ್ಮೆ ಸಂಕಷ್ಟಕ್ಕೆ ಸಿಕ್ಕಿಹಾಕಿದ್ದ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ಒಂದೆಡೆ ಸಿಬ್ಬಂದಿಗೆ ಇನ್ನೂ ಜುಲೈ ತಿಂಗಳ ವೇತನ ಪಾವತಿಸಿಲ್ಲ. ಮತ್ತೊಂದೆಡೆ ವಾಯುಸೀಮೆ ಬಳಸಿದ್ದಕ್ಕೆ ನೀಡದ ಹಣ ಪಾವತಿ ನೀಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಸೀಮೆ ಬಳಕೆಗೆ ಅವಕಾಶ ನಿರಾಕರಿಸಿದೆ. ಅದರ ಬೆನ್ನಲ್ಲೇ ದುಬೈ ಏರ್ಪೋರ್ಟ್‌ ಕೂಡಾ ವಿವಿಧ ಶುಲ್ಕ ಪಾವತಿ ಮಾಡದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ ವಿಮಾನಗಳ ಸಂಚಾರಕ್ಕೆ ತಡೆಯೊಡ್ಡಿದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು ಆ.7 ಮತ್ತು 8ರಂದು ಕಂಪನಿಯ ವಿಶೇಷ ಲೆಕ್ಕ ಪರಿಶೋಧನೆ ನಡೆಸಿದೆ. ಅದಾದ ಬಳಿಕ ಸ್ಪೈಸ್‌ಜೆಟ್‌ ವಿಮಾನಗಳ ಸಂಚಾರವನ್ನು ತನ್ನ ನಿಗಾದ ವ್ಯಾಪ್ತಿಗೆ ತರಲು ನಿರ್ಧರಿಸಿದೆ.

==

ಷೇರುಪೇಟೆ ದಾಖಲೆ: ಸೆನ್ಸೆಕ್ಸ್‌ 82,134ಕ್ಕೆ ನಿಫ್ಟಿ 25,151ಕ್ಕೆ ನೆಗೆತ

ಮುಂಬೈ: ಭಾರತದ ಷೇರುಪೇಟೆಗಳೆರಡೂ ಗುರುವಾರ ಮತ್ತೆ ದಾಖಲೆ ಬರೆದಿವೆ. ಬಾಂಬ್‌ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 349 ಅಂಕಗಳ ಜಿಗಿತ ಕಂಡಿದ್ದು, 82,134ಕ್ಕೆ ತಲುಪಿದೆ. ಅದೇ ರೀತಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡ 99 ಅಂಕಗಳ ಏರಿಕೆ ಕಂಡು 25,151 ಅಂಕಕ್ಕೆ ತಲುಪಿದೆ.ಸೆನ್ಸೆಕ್ಸ್‌ ಒಂದು ಸಮಯದಲ್ಲಿ 500 ಅಂಕಗಳು ಏರಿಕೆ ಕಂಡು 82,285 ಕ್ಕೆ ತಲುಪಿತ್ತು. ಕೊನೆಗೆ ಏರಿಕೆ ಪ್ರಮಾಣ ಕೊಂಚ ಇಳಿಯಿತು.

ಪೇಟಿಎಂ ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಮಾರುತಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳಲ್ಲಿ ಏರಿಕೆ ಕಂಡಿವೆ. ಅದರಲ್ಲಿ ಟಾಟಾ ಮೋಟಾರ್ಸ್ ಷೇರುಗಳು ಶೇ.4 ರಷ್ಟು ಏರಿಕೆಯಾಗಿದೆ.

==

ಭಾರತದ ಜಿಡಿಪಿ ಬೆಳವಣಿಗೆ ಶೇ.7.2ಕ್ಕೆ ಏರಿಕೆ: ಮೂಡೀಸ್‌

ನವದೆಹಲಿ: 2024ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿಯು ಶೇ.7.2ಕ್ಕೆ ಏರಲಿದೆ ಎಂದು ಆರ್ಥಿಕ ಶ್ರೇಯಾಂಕ ನೀಡುವ ಜಾಗತಿಕ ಕಂಪನಿ ಮೂಡೀಸ್‌ ರೇಟಿಂಗ್‌ ಹೇಳಿದೆ.ಹಣಕಾಸು ವಲಯದಲ್ಲಿ ಸ್ಥಿರ ಬೆಳವಣಿಗೆ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತದ ಸರ್ಕಾರ ಪ್ರಗತಿ ಸಾಧಿಸುತ್ತಿದೆ. ಹೀಗಾಗಿ 2024ರ ಹಣಕಾಸು ಪ್ರಗತಿಯನ್ನು ಶೇ.6.6ರಿಂದ ಶೇ.7.2ಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ 2025ರ ಬೆಳವಣಿಗೆಯನ್ನು ಶೇ.6.4ರಿಂದ ಶೇ.6.6ಕ್ಕೆ ಏರಿಸಲಾಗಿದೆ ಎಂದೂ ಮೂಡೀಸ್‌ ಹೇಳಿದೆ.

ಮತ್ತೊಂದೆಡೆ, ಭಾರತದಲ್ಲಿ ಆಂತರಿಕ ಹಣಕಾಸು ಸ್ಥಿತಿ ಮತ್ತು ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲನ್ನು ಆಧರಿಸಿ ಫಿಚ್‌ ರೇಟಿಂಗ್‌ ಸಂಸ್ಥೆಯು ಭಾರತಕ್ಕೆ ಬಿಬಿಬಿ- (ಬೆಟರ್‌ ಬಿಸಿನೆಸ್‌ ಬ್ಯೂರೋ) ಶ್ರೇಯಾಂಕ ನಿಡಿದ. ಇದು ಸ್ಥಿರ ಶ್ರೇಯಾಂಕವಾಗಿದೆ.