ಜಲಪಾತದ ಜೊತೆ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ 150 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ

| Published : Aug 05 2024, 12:38 AM IST / Updated: Aug 05 2024, 05:23 AM IST

ಸಾರಾಂಶ

ಚಾರಣಕ್ಕೆಂದು ಬಂದಿದ್ದ ಯುವತಿಯೊಬ್ಬಳು ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ 150 ಅಡಿ ಆಳದ ಕಣಿವೆಗೆ ಬಿದ್ದ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ.

ಮುಂಬೈ: ಚಾರಣಕ್ಕೆಂದು ಬಂದಿದ್ದ ಯುವತಿಯೊಬ್ಬಳು ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ 150 ಅಡಿ ಆಳದ ಕಣಿವೆಗೆ ಬಿದ್ದ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ಪರ್ವತಾರೋಹಿಗಳನ್ನೊಳಗೊಂಡ ರಕ್ಷಣಾ ತಂಡ ಸಕಾಲದಲ್ಲಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಪುಣೆಯಿಂದ ಥೋಸೇಘರ್ ಜಲಪಾತ ವೀಕ್ಷಿಸಲು ಹೊರಟಿದ್ದ ಎಂಟು ಮಂದಿಯ ಗುಂಪಿನಲ್ಲಿ ಈಕೆಯೂ ಇದ್ದಳು. ಆದರೆ ಭಾರೀ ಮಳೆಯಿಂದಾಗಿ ಅಲ್ಲಿಗೆ ಪ್ರವೇಶವಿರದಿದ್ದ ಕಾರಣ ಬೊರ್ನೆ ಘಾಟ್‌ಗೆ ಹೋಗಲು ಅವರು ನಿರ್ಧರಿಸಿದ್ದರು. ಅಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕೆಳಕೆ ಉರುಳಿದ್ದಳು.

ಒತ್ತುವರಿ ತೆರವು ವಿರೋಧಿಸಿ ಮಹಿಳಾ ಅಧಿಕಾರಿಗೆ ಟಿಎಂಸಿ ಸಚಿವ ಗಿರಿ ಜೀವ ಬೆದರಿಕೆ

ಕೊಲ್ಕತಾ: ಮಹಿಳಾ ಅರಣ್ಯಾಧಿಕಾರಿಯೊಬ್ಬರು ಅರಣ್ಯ ಒತ್ತುವರಿ ತೆರವಿಗೆ ಮುಂದಾದ ವೇಳೆ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ, ಬೆದರಿಕೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಜಿಲ್ಲಾ ಅರಣ್ಯಾಧಿಕಾರಿ ಮನಿಷಾ ಶಾವು ಮತ್ತು ಸಿಬ್ಬಂದಿ ಪುರ್ಬಾ ಮೇದಿನಿಪುರ ಜಿಲ್ಲೆಯ ತಾಜ್‌ಪುರ ಬೀಚ್‌ ಸಮೀಪದಲ್ಲಿ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಖಿಲ್‌ ಗಿರಿ, ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮಹಿಳಾ ಅಧಿಕಾರಿ ಇದನ್ನು ಪ್ರಶ್ನಿಸಿದ್ದಕ್ಕೆ, ‘ ನೀವು ಸರ್ಕಾರಿ ಉದ್ಯೋಗಿ. ತಲೆ ಬಗ್ಗಿಸಿ ನನ್ನ ಬಳಿ ಮಾತನಾಡು. ಒಂದು ವಾರದಲ್ಲಿ ಏನಾಗುತ್ತದೆ ನೋಡು, ಈ ಪ್ರಕರಣದಲ್ಲಿ ನೀನು ಮತ್ತೇ ಮಧ್ಯಪ್ರವೇಶಿಸಿದರೆ ನೀನು ಮತ್ತೆ ಹಿಂದಿರುಗಿ ಮನೆಗೆ ಹೋಗುವುದಿಲ್ಲ. ನಿನ್ನ ಹಾದಿ ಸರಿಪಡಿಸಿಕೋ, ಇಲ್ಲಿದ್ದರೆ ಕೋಲಿನಿಂದ ಹೊಡೆಯುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾರೆ. ಈ ಘಟನೆಗೆ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಘಟನೆ ಕುರಿತು ಕ್ಷಮೆಯಾಚಿಸಿ ಸಚಿವ ಹುದ್ದೆಗೆ ರಾಜೀನಾಮೆ ನೀಡುವಂತೆ ಅಖಿಲ್‌ಗೆ ಟಿಎಂಸಿ ಸೂಚಿಸಿದೆ.

ಬಿಹಾರ ಸಿಎಂ ನಿತೀಶ್‌ ಕಚೇರಿಗೆ ಬಾಂಬ್‌ ಬೆದರಿಕೆ: ಅಲ್ಖೈದಾ ವಿರುದ್ಧ ಪ್ರಕರಣ

ಪಟನಾ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಚೇರಿಗೆ ಇ ಮೇಲ್ ಮೂಲಕ ಒಡ್ಡಲಾದ ಬಾಂಬ್ ಬೆದರಿಕೆ ಸಂಬಂಧ ಬಿಹಾರ ಪೊಲೀಸರು ಅಲ್‌ಖೈದಾ ಉಗ್ರ ಸಂಘಟನೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಜು.16ರಂದು ಕಳಿಸಲಾದ ಇ ಮೇಲ್‌ನಲ್ಲಿ ತನ್ನನ್ನು ತಾನು ಅಲ್ ಖೈದಾದೊಂದಿಗೆ ಸಂಬಂಧ ಹೊಂದಿದವನೆಂದು ಹೇಳಿಕೊಂಡ ವ್ಯಕ್ತಿ ಸಿಎಂ ಕಚೇರಿಯ ಆವರಣದಲ್ಲಿ ಬಾಂಬ್ ಇರಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಆ.2ರಂದು ಭಾರತೀಯ ನ್ಯಾಯ ಸಂಹಿತೆ ಮತ್ತು ಐಟಿ ಕಾಯ್ದೆಯ ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಗಾಜಾ ಮೇಲೆ ಇಸ್ರೇಲ್‌ ವಾಯುದಾಳಿಗೆ 18 ಬಲಿ

ಟೆಲ್ ಅವಿವ್‌: ಇಸ್ರೇಲ್‌ ಹಾಗೂ ಇರಾನ್‌ ನಡುವೆ ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಿತಿ ತ್ವೇಷಗೊಂಡಿರುವ ನಡುವೆಯೇ ಭಾನುವಾರ ಮುಂಜಾನೆ ಗಾಜಾ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿ 18 ಜನರನ್ನು ಕೊಂದು ಹಾಕಿದೆ. ಮೃತರಲ್ಲಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿದ್ದ ನಿರಾಶ್ರಿತರ ಟೆಂಟ್‌ನಲ್ಲಿ ತಂಗಿದ್ದ ನಾಲ್ವರೂ ಸೇರಿದ್ದಾರೆ.

ಇದೇ ವೇಳೆ, ಇಸ್ರೇಲ್‌ ಟೆಲ್ ಅವಿವ್‌ ಉಪನಗರದಲ್ಲಿ ಪ್ಯಾಲೆಸ್ತೀನಿ ವ್ಯಕ್ತಿಯೊಬ್ಬ ಚೂರಿ ದಾಳಿನ ನಡೆಸಿದ್ದು, ಇಬ್ಬರನ್ನು ಇರಿದು ಸಾಯಿಸಿದ್ದಾನೆ.

ಗಾಜಾದಲ್ಲಿ ಸುಮಾರು 10 ತಿಂಗಳ ಯುದ್ಧದ ನಂತರ ಕೊಂಚ ತಣ್ಣಗಾಗಿದ್ದ ಪರಿಸ್ಥಿತಿ ಈಗ ಹಮಾಸ್‌ ಉಗ್ರ ಸಂಘಟನೆ ನಾಯಕ ಇಸ್ಮಾಯಿಲ್‌ ಹನಿಯೆ ಹಾಗೂ ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಮುಖಂಡನನ್ನು ಶಂಕಿತ ಇಸ್ರೇಲಿ ವಾಯುದಾಳಿಗಳು ಕೆಲವು ದಿನ ಹಿಂದೆ ಸಾಯಸಿದ್ದವು. ನಂತರ ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಇರಾನ್‌ ನೆಲದಲ್ಲಿ ಹನಿಯೆ ಹತ್ಯೆ ನಡೆದ ಕಾರಣ ಇಸ್ರೇಲ್‌ ವಿರುದ್ಧ ಸಮರ ಸಾರುವ ಎಚ್ಚರಿಕೆಯನ್ನು ಇರಾನ್‌ ನೀಡಿದೆ.

ಸಮುದ್ರಕ್ಕೆ ಕಾವೇರಿ ವ್ಯರ್ಥವಾಗಿ ಹೋಗದಂತೆ ಅಣೆಕಟ್ಟು ಕಟ್ಟಿ: ರೈತರ ಆಗ್ರಹ

ಮೈಲಾಡುತುರೈ (ತಮಿಳುನಾಡು): ಕಾವೇರಿ ನದಿಯ ಹೆಚ್ಚುವರಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟಲು ಬ್ಯಾರೇಜ್‌ ಹಾಗೂ ಅಣೆಕಟ್ಟು ನಿರ್ಮಿಸಬೇಕು ಎಂದು ಭಾನುವಾರ ರೈತರು ಪ್ರತಿಭಟನೆ ನಡೆಸಿದರು.ಕಾವೇರಿ ನದಿಗೆ ಕೊಲ್ಲಿಡ್ಯಾಂ ನದಿ ಎಂಬ ಉಪನದಿ ಇದ್ದು, ಅದಕ್ಕೆ ಪ್ರತಿ 5 ಕಿ.ಮೀ.ಗೆ ಒಂದು ಬಾಂದಾರ ನಿರ್ಮಿಸಬೇಕು. ಅಲ್ಲದೆ, ಹೊಗೇನಕಲ್‌ ಬಳಿಯ ರಾಸಿಮನಲ್‌ ಎಂಬಲ್ಲಿ ಅಣೆಕಟ್ಟು ಕಟ್ಟಬೇಕು. ಇದರಿಂದ ಹೆಚ್ಚುವರಿ ನೀರು ಸಮುದ್ರಕ್ಕೆ ಹೋಗುವುದು ತಪ್ಪುತ್ತದೆ ಎಂದ ರೈತರು, ಕರ್ನಾಟಕದ ಮೇಕೆದಾಟು ಅಣೆಕಟ್ಟೆ ನಿರ್ಮಾಣವನ್ನು ವಿರೋಧಿಸಿದರು.