ವಿವಾದಿತ ವಿವಾಹದ ವಯೋಮಿತಿ ಇಳಿಕೆ ಮಸೂದೆ ಮಂಡನೆ : ಗಂಡಿಗೆ 15 - ಹೆಣ್ಣಿಗೆ 9 - ಭಾರೀ ಟೀಕೆ

| Published : Aug 10 2024, 01:37 AM IST / Updated: Aug 10 2024, 04:58 AM IST

The wife divorced within 3 minutes of marriage

ಸಾರಾಂಶ

ಗಂಡು ಮಕ್ಕಳ ವಿವಾಹದ ವಯೋಮಿತಿಯನ್ನು 18ರಿಂದ 15ಕ್ಕೆ ಮತ್ತು ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9 ಕ್ಕೆ ಇಳಿಸುವ ವಿವಾದಿತ ಮಸೂದೆಯೊಂದನ್ನು ಇರಾಕ್‌ನ ಸಂಸತ್‌ನಲ್ಲಿ ಮಂಡಿಸಲಾಗಿದೆ.

ನವದೆಹಲಿ: ಗಂಡು ಮಕ್ಕಳ ವಿವಾಹದ ವಯೋಮಿತಿಯನ್ನು 18ರಿಂದ 15ಕ್ಕೆ ಮತ್ತು ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9 ಕ್ಕೆ ಇಳಿಸುವ ವಿವಾದಿತ ಮಸೂದೆಯೊಂದನ್ನು ಇರಾಕ್‌ನ ಸಂಸತ್‌ನಲ್ಲಿ ಮಂಡಿಸಲಾಗಿದೆ. 

ಇತ್ತೀಚೆಗೆ ನಡೆದ ಸಂಸತ್‌ ಚುನಾವಣೆಯಲ್ಲಿ ಸುಧಾರಣಾವಾದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅದರ ಹೊರತಾಗಿಯೂ ಇಂಥದ್ದೊಂದು ಮಸೂದೆ ಮಂಡಿಸಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

ಒಂದು ವೇಳೆ ಮಸೂದೆ ಅಂಗೀಕಾರವಾದರೆ, ಇರಾಕ್‌ನಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುವ ಆತಂಕವಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು, ಮಹಿಳಾ ಹಕ್ಕು ಸಂಘಟನೆಯು ಈ ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಈ ನಿರ್ಧಾರದಿಂದ ಇರಾಕ್‌ನಲ್ಲಿ ಲಿಂಗ ತಾರತಮ್ಯ ಹೆಚ್ಚಳವಾಗಬಹುದು. ಹೆಣ್ಣು ಮಕ್ಕಳ ಶಿಕ್ಷಣ ಮೇಲೆಯೂ ಪರಿಣಾಮ ಬೀರಬಹುದು.ಆರಂಭಿಕ ಗರ್ಭಾವಸ್ಥೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಳವಾಗಬಹುದು ಎಂದು ಅವು ಆಕ್ರೋಶ ವ್ಯಕ್ತ ಪಡಿಸಿವೆ.

ಇದರ ಜೊತೆಗೆ ವಿವಾಹದ ಬಳಿಕ ಉಂಟಾಗುವ ಯಾವುದೇ ವಿವಾದವನ್ನು ನ್ಯಾಯಾಲಯಗಳು ಪರಿಹರಿಸಬೇಕೇ ಅಥವಾ ಧಾರ್ಮಿಕ ನ್ಯಾಯಾಲಯಗಳು ಬಗೆಹರಿಸಬೇಕೆ ಎಂಬುದರ ಕುರಿತು ದಂಪತಿ ಮೊದಲೇ ನಿರ್ಧರಿಸಬೇಕು ಎಂಬ ಅಂಶವೂ ವಿವಾದಿತ ಮಸೂದೆಯಲ್ಲಿದೆ. ಇರಾಕ್‌ನ ಷರಿಯಾ ಕಾನೂನಿಗೆ ಪೂರಕ ಎನ್ನುವಂತೆ ರೂಪಿತವಾಗಿರುವ ಈ ಕಾನೂನು ಭಾರೀ ವಿವಾದಕ್ಕೆ ಕಾರಣವಾಗಿದೆ. 

ಕಳೆದ ಜುಲೈ ತಿಂಗಳಿನಲ್ಲಿ ಇರಾಕ್‌ನಲ್ಲಿ ಹೆಣ್ಣುಮಕ್ಕಳ ವಿವಾಹ ವಯಸ್ಸು ಇಳಿಕೆ ಮಾಡುವ ಪ್ರಸ್ತಾವನೆ ಸಲ್ಲಿಕೆಯಾಗಿತ್ತು, ಆದರೆ ಸಂಸದರ ವಿರೋಧದಿಂದ ಮಸೂದೆ ಪಾಸ್‌ ಆಗಿರಲಿಲ್ಲ. ಯುನಿಸೆಫ್‌ನ ಪ್ರಕಾರ , ಇರಾಕ್‌ನಲ್ಲಿ ಶೇ.28ರಷ್ಟು ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುನ್ನವೇ ಮದುವೆಯಾಗುತ್ತಿದ್ದಾರೆ.