2023ರಲ್ಲಿ ಜಾಗತಿಕ ಮಿಲಿಟರಿ ವೆಚ್ಚ ₹ 207 ಲಕ್ಷ ಕೋಟಿ: ವರದಿ

| Published : Apr 24 2024, 02:15 AM IST

ಸಾರಾಂಶ

2023ನೇ ಸಾಲಿನಲ್ಲಿ ಭಾರತದ ರಕ್ಷಣಾ ಪಡೆಗಳು ಬರೋಬ್ಬರಿ 7,10,600 ಕೋಟಿ ರು. ಖರ್ಚು ಮಾಡುವ ಮೂಲಕ ಜಾಗತಿಕ ರಕ್ಷಣಾ ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ನವದೆಹಲಿ: 2023ನೇ ಸಾಲಿನಲ್ಲಿ ಭಾರತದ ರಕ್ಷಣಾ ಪಡೆಗಳು ಬರೋಬ್ಬರಿ 7,10,600 ಕೋಟಿ ರು. ಖರ್ಚು ಮಾಡುವ ಮೂಲಕ ಜಾಗತಿಕ ರಕ್ಷಣಾ ವೆಚ್ಚದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಸ್ಟಾಕ್‌ಹೋಮ್‌ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

2023ರಲ್ಲಿ ಪ್ರಪಂಚದಲ್ಲಿ ಎಲ್ಲಾ ದೇಶಗಳ ರಕ್ಷಣಾ ವೆಚ್ಚ 2,07,65,500 ಕೋಟಿ ರು.ನಷ್ಟಿತ್ತು. ಇದು 2022ರ ವೆಚ್ಚಕ್ಕಿಂತ ಶೇ.6.8ರಷ್ಟು ಏರಿಕೆ. ಜೊತೆಗೆ ಸತತ 9ನೇ ವರ್ಷ ಜಾಗತಿಕವಾಗಿ ರಕ್ಷಣಾ ವೆಚ್ಚದಲ್ಲಿ ಏರಿಕೆ ದಾಖಲಾಗಿದೆ ಎಂದು ವರದಿ ಹೇಳಿದೆ.

ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಮೆರಿಕ ಅಲಂಕರಿಸಿದ್ದು, ಚೀನಾ ಮತ್ತು ರಷ್ಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಏಕೆ ಏರಿಕೆ?

ಈ ಬಾರಿ ಜಾಗತಿಕವಾಗಿ ಶಾಂತಿ ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳು ತಮ್ಮ ಮಿಲಿಟರಿ ವೆಚ್ಚದಲ್ಲಿ ಏರಿಕೆ ಮಾಡಿಕೊಂಡಿವೆ. ಎಲ್ಲ ರಾಷ್ಟ್ರಗಳೂ ಸಹ ಶಸ್ತ್ರಾಸ್ತ್ರಗಳ ಶೇಖರಣೆಯಲ್ಲಿ ಪೈಪೋಟಿಗೆ ಬಿದ್ದು ವೆಚ್ಚನ್ನು ಏರಿಕೆ ಮಾಡಿಕೊಳ್ಳುತ್ತಿವೆ. ಆದರೆ ಭಾರತ ತನ್ನ ಜಿಡಿಪಿಯ ಶೇ.1.9ನ್ನು ಮಾತ್ರ ರಕ್ಷಣಾ ವೆಚ್ಚಕ್ಕೆ ನೀಡುತ್ತಿದ್ದು, ಇತರ ರಾಷ್ಟ್ರಗಳು ಶೇ.2-5ರಷ್ಟು ವೆಚ್ಚ ಮಾಡುತ್ತಿವೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.