ಸಾರಾಂಶ
ನವದೆಹಲಿ: ಡೀಪ್‌ಫೇಕ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸರ್ಕಾರ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಐಟಿ ನಿಯಮಗಳನ್ನು ಎಲ್ಲಾ ಬಳಕೆದಾರರಿಗೆ ಅವರ ಭಾಷೆಯಲ್ಲೇ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದೆ.
ಕೇಂದ್ರ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಯಾವುದೇ ಸಾಮಾಜಿಕ ಜಾಲತಾಣಕ್ಕೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಸ್ಪಷ್ಟವಾಗಿ ಮತ್ತು ನಿಖರವಾಗಿ ಐಟಿ ನಿಯಮಗಳನ್ನು ಬಳಕೆದಾರರಿಗೆ ತಿಳಿಸಬೇಕು. ಅಲ್ಲದೇ ಆಗಾಗ್ಗೆ ಈ ನಿಯಮಗಳ ಕುರಿತಾಗಿ ಎಚ್ಚರಿಕೆಯನ್ನು ನೀಡಬೇಕು. ಪ್ರತಿಬಾರಿ ಲಾಗಿನ್ ಆಗಿ ಮಾಹಿತಿಗಳನ್ನು ಪೋಸ್ಟ್ ಮಾಡುವಾಗಲೂ ಈ ನಿಯಮಗಳ ಬಗ್ಗೆ ತಿಳಿಸಬೇಕು.
ಅಲ್ಲದೇ ಈ ನಿಯಮಗಳನ್ನು ಬಳಕೆದಾರರ ಭಾಷೆಯಲ್ಲಿಯೇ ಅವರಿಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.ಇದರೊಂದಿಗೆ, ಐಟಿ ನಿಯಮಗಳನ್ನು ಉಲ್ಲಂಘಿಸುವುದು ಕಾನೂನು ಕ್ರಮ ಕೈಗೊಳ್ಳಲು ಕಾರಣವಾಗುತ್ತದೆ ಎಂಬ ಅಂಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಹಾನಿಕಾರಕ ಎಂದು ಗುರುತಿಸಲಾಗಿರುವ 11 ಅಂಶಗಳನ್ನು ಉತ್ತೇಜಿಸುವುದು, ಪ್ರಕಟಿಸುವುದು, ಬದಲಾಯಿಸುವುದು, ಹಂಚುವುದನ್ನು ಸಾಮಾಜಿಕ ಜಾಲತಾಣಗಳು ತಡೆಗಟ್ಟಬೇಕು ಎಂದು ಪ್ರಕಟಣೆ ತಿಳಿಸಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಸೇರಿ ಹಲವು ನಟಿಯರ ಮುಖವನ್ನು ಬೇರೆ ಯಾರದ್ದೋ ಅರೆನಗ್ನ ದೇಹಗಳಿಗೆ ಅಂಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕೃತಕ ಬುದ್ಧಿಮತ್ತೆ ಬಳಸಿ ನಡೆಸುವ ಇಂಥ ಕೃತ್ಯಗಳಿಗೆ ಡೀಪ್‌ಫೇಕ್ ಎನ್ನುತ್ತಾರೆ.
ಇಂಥ ಕೃತ್ಯ ಹೆಚ್ಚಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಕಳವಳ ವ್ಯಕ್ತಪಡಿಸಿ, ನಿಯಮ ಬಿಗಿ ಮಾಡಲು ಸೂಚಿಸಿದ್ದರು. ಹೀಗಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ್ ಅವರು ಸೋಷಿಯಲ್ ಮೀಡಿಯಾ ಕಂಪನಿಗಳ ಜತೆ ಹಲವು ಸುತ್ತಿನ ಸಭೆ ನಡೆಸಿದ್ದರು.