ಸಾರಾಂಶ
ನವದೆಹಲಿ: ದೇಶಾದ್ಯಂತ ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ದರ 2000 ರು.ನಷ್ಟು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿ (ಬಾರ್) ಬೆಲೆ 95890 ರು.ಗೆ ತಲುಪಿದೆ. ಇನ್ನೊಂದೆಡೆ ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 94,150 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನಕ್ಕೆ ಬೇಡಿಕೆ, ದೇಶೀಯ ಮಾರುಕಟ್ಟೆಯಲ್ಲಿ ಆಭರಣ ವರ್ತಕರಿಂದ ಹೆಚ್ಚಿನ ಖರೀದಿ, ಷೇರು ಮಾರುಕಟ್ಟೆಗಳ ಕುಸಿತ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಗಟ್ಟಿ ಬೆಲೆ 95890 ರು.ಗೆ ತಲುಪಿದೆ. ಆದರೆ ಆಭರಣ ಮಳಿಗೆಗಳಲ್ಲಿ ಜಿಎಸ್ಟಿ ಹೊರತುಪಡಿಸಿ 1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಸರಾಸರಿ 9285 ರು. ದರ ಇದ್ದರೆ, 22 ಕ್ಯಾರೆಟ್ ಚಿನ್ನಕ್ಕೆ ಸರಾಸರಿ 8510 ರು. ಇದರ ದಾಖಲಾಗಿದೆ.
ಇನ್ನು ದೆಹಲಿಯಲ್ಲಿ ಆಭರಣ ಚಿನ್ನ ಮಂಗಳವಾರ ಒಂದೇ ದಿನ 10 ಗ್ರಾಂಗೆ 2 ಸಾವಿರ ರು. ಗ್ರಾಂಗೆ ಸಾರ್ವಕಾಲಿಕ 93,700 ರು.ಗೆ ತಲುಪಿತು. 99.9 ಶುದ್ಧತೆಯ ಗಟ್ಟಿ ಚಿನ್ನ 10 ಗ್ರಾಂಗೆ 2000 ರು. ಏರಿಕೆಯಾಗಿ 94,150ರು. ತಲುಪಿದೆ. ಮುಂಬೈನಲ್ಲಿಯೂ ದರದಲ್ಲಿ ಹೆಚ್ಚಾಗಿದ್ದು, 10 ಗ್ರಾಂಗೆ ಆಭರಣ ಚಿನ್ನದ ದರ 90,750 ರು. , ಗಟ್ಟಿ ಚಿನ್ನದ ದರ 91,115 ರು. ತಲುಪಿದೆ.
ಈ ನಡುವೆ ದೆಹಲಿಯಲ್ಲಿ ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು 1 ಕೇಜಿ ಬೆಳ್ಳಿ ದರ 500 ರು. ಏರಿಕೆಯೊಂದಿಗೆ 1,05,500 ರು.ಗೆ ತಲುಪಿತ್ತು. ಇನ್ನು ಬೆಂಗಳೂರಿನಲ್ಲಿ ಒಂದು ಕೇಜಿ ಬೆಳ್ಳಿ 106400 ತಲುಪಿದೆ. ಮುಂಬೈನಲ್ಲಿ 99,641ರು ತಲುಪಿದೆ.
ಕಳೆದ ವರ್ಷಕ್ಕಿಂತ ಶೇ.35ರಷ್ಟು ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಚಿನ್ನದ ದರದಲ್ಲಿ ಶೇ.35ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಚಿನ್ನ ದ ಸುಮಾರು 68 ಸಾವಿರವಿದ್ದ ಚಿನ್ನದ ದರ ಈಗ 95 ಸಾವಿರ ತಲುಪಿದ್ದು 25 ಸಾವಿರ ರು. ಏರಿಕೆಯಾಗಿದೆ.
ಭಾರತದಲ್ಲಿನ ಚಿನ್ನ ಸಂಗ್ರಹ ವಿಶ್ವದ ಟಾಪ್ 10 ಬ್ಯಾಂಕ್‌ಗಳಿಗಿಂತ ಹೆಚ್ಚು!
ನವದೆಹಲಿ: ಕಳೆದೊಂದು ವರ್ಷದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 30000 ರು.ನಷ್ಟು ಹೆಚ್ಚಾಗಿದ್ದು ಭಾರತೀಯರ ಸಂಪತ್ತಿನಲ್ಲಿ ಭರ್ಜರಿ 64 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ.ಭಾರತದಲ್ಲಿ ಚಿನ್ನವನ್ನು ಆಭರಣದ ಜೊತೆಗೆ, ಹೂಡಿಕೆಯಾಗಿಯೂ ಪರಿಗಣಿಸಲಾಗುತ್ತದೆ. ಹೀಗಾಗಿಯೇ ದರ ಎಷ್ಟೇ ಹೆಚ್ಚಾದರೂ ಖರೀದಿ ಮಾತ್ರ ಕಡಿಮೆಯಾಗಲ್ಲ. ಹೀಗೆ ಶತಶತಮಾನಗಳಿಂದ ಭಾರತದ ಖಾಸಗಿ ವಲಯದಲ್ಲಿ ಅಂದರೆ ಜನಸಾಮಾನ್ಯ ಬಳಿ ಸಂಗ್ರಹವಾಗಿರುವ ಚಿನ್ನದ ಪ್ರಮಾಣದ ಅಂದಾಜು 25000 ಟನ್‌ನಷ್ಟು ಎಂಬ ಅಂದಾಜಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಪರಿಣಾಮ ಒಂದೇ ವರ್ಷದಲ್ಲಿ ಭಾರತೀಯರು ಹೊಂದಿರುವ ಚಿನ್ನದ ಮೌಲ್ಯದಲ್ಲೂ ಭರ್ಜರಿ 64 ಲಕ್ಷ ಕೋಟಿ ರು. ನಷ್ಟು ಏರಿಕೆಯಾಗಿದೆ.ಜನಸಾಮಾನ್ಯರಂತೆ ದೇಶದ ಕೇಂದ್ರೀಯ ಬ್ಯಾಂಕ್‌ಗಳು ಕೂಡಾ ಚಿನ್ನವನ್ನು ದೊಡ್ಡಪ್ರಮಾಣದಲ್ಲಿ ಸಂಗ್ರಹ ಮಾಡಿಡುತ್ತವೆ. ಹೀಗೆ ಅತಿ ಹೆಚ್ಚು ಚಿನ್ನ ಸಂಗ್ರಹದ ಹೊಂದಿರುವ ಅಮೆರಿಕ, ಚೀನಾ, ಜರ್ಮನಿ ಸೇರಿದಂತೆ ಟಾಪ್ 10 ಬ್ಯಾಂಕ್‌ಗಳು ಹೊಂದಿರುವ ಚಿನ್ನದ ಪ್ರಮಾಣಕ್ಕಿಂತಲೂ ಹೆಚ್ಚಿನ ಚಿನ್ನ ಭಾರತದಲ್ಲಿ ಜನಸಾಮಾನ್ಯರ ಬಳಿ ಇದೆ ಎಂದು ವರದಿ ಹೇಳಿದೆ.