ಸಾರಾಂಶ
ನವದೆಹಲಿ: ಗುರುವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ದ್ರೌಪದಿ ಮುರ್ಮು ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ವಿಪಕ್ಷಗಳು ಕಿಡಿ ಕಾರಿವೆ. ಸರ್ಕಾರವು ನೀಡಿದ ಸ್ಕ್ರಿಪ್ಟ್ ಸುಳ್ಳಿನಿಂದ ತುಂಬಿದೆ ಎಂದು ಟೀಕಿಸಿದ್ದು1975ರ ತುರ್ತು ಪರಿಸ್ಥಿತಿ ಉಲ್ಲೇಖದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಅಧ್ಯಕ್ಷರ ಬಾಷಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಸಿಂಗ್ ಯಾದವ್, ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋದವರಿಗೆ ಬಿಜೆಪಿ ಏನು ಮಾಡಿದೆ?ಎಸ್‌ಪಿ ಪಿಂಚಣಿ ಕೊಟ್ಟಿದೆ’ ಎಂದರು. ಅಲ್ಲದೇ ಇದೇ ವೇಳೆ, ದೇಶ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ ಎಂದಿರುವ ಮಾತು ಸುಳ್ಳಿನ ಕಥೆ ಎಂದರು.
‘ಮೂರನೇ ಬಾರಿಗೆ ಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಜಗತ್ತು ಸಾಕ್ಷಿಯಾಗಿದೆ’ ಎಂದು ಮುರ್ಮು ಭಾಷಣದ ವೇಳೆ ಹೇಳಿದ್ದರು. ಇದಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿ, ‘ಬಿಜೆಪಿಗೆ ಸ್ವಂತ ಬಹುಮತವಿಲ್ಲ ಎಂದು ಇನ್ನೂ ತಿಳಿದುಕೊಂಡಿಲ್ಲ. ಬಹುಶಃ ಕಳೆದ ಅವಧಿಯ ಭಾಷಣದ ಅಂಶಗಳನ್ನೇ ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿಯವರು, ಸರ್ಕಾರ ಬರೆದ ಸ್ಕ್ರಿಪ್ಟ್ ಓದಿದರು’ ಎಂದರು.