ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಟ್ವೀಟರ್) ಕೃತಕ ಬುದ್ಧಿಮತ್ತೆ ಬಳಸಿ ಉತ್ತರ ಕೊಡುವ ಎಐ ಸಾಧನವಾದ ‘ಗ್ರೋಕ್’ ಮೇಲೆ ನಿರ್ಬಂಧ ಹೇರಬೇಕು ಅಥವಾ ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಶುಕ್ರವಾರ ಕಠಿಣ ಕ್ರಮ ಜರುಗಿಸಿದೆ.
- ಎಕ್ಸ್‌ಗೆ 72 ತಾಸು ಗಡುವು ನೀಡಿದ ಸರ್ಕಾರ- ಬಿಕಿನಿ ಫೋಟೋ ಗದ್ದಲದ ಬೆನ್ನಲ್ಲೇ ಕ್ರಮ
---ಏಕೆ ನೋಟಿಸ್?
- ಎಕ್ಸ್‌ನ ಎಐ ಟೂಲ್ ಆಗಿರುವ ಗ್ರೋಕ್ ಬಳಸಿ ಬೇನಾಮಿ ಬಳಕೆದಾರರ ಕಿತಾಪತಿ- ಮಹಿಳೆಯರ ಫೋಟೋ ಅಪ್‌ಲೋಡ್ ಮಾಡಿ ಬಿಕಿನಿಯಲ್ಲಿ ತೋರಿಸುವಂತೆ ಬೇಡಿಕ
- ಅವರ ಕೋರಿಕೆ ಈಡೇರಿಸುತ್ತಿದ್ದ ಗ್ರೋಕ್. ಈ ಬಗ್ಗೆ ಎಕ್ಸ್‌ನಲ್ಲಿ ಹಲವರಿಂದ ಆಕ್ಷೇಪ- ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಸೇರಿ ಅನೇಕರ ಫೋಟೋ ದುರ್ಬಳಕೆ- ಇದರ ವಿರುದ್ಧ ಕ್ರಮಕ್ಕೆ ಕೇಂದ್ರಕ್ಕೆ ಸಂಸದರು, ಜನತೆ ಆಗ್ರಹ. ಬೆನ್ನಲ್ಲೇ ಕೇಂದ್ರ ಕ್ರಮ==
ಪಿಟಿಐ ನವದೆಹಲಿಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಟ್ವೀಟರ್) ಕೃತಕ ಬುದ್ಧಿಮತ್ತೆ ಬಳಸಿ ಉತ್ತರ ಕೊಡುವ ಎಐ ಸಾಧನವಾದ ‘ಗ್ರೋಕ್’ ಮೇಲೆ ನಿರ್ಬಂಧ ಹೇರಬೇಕು ಅಥವಾ ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಶುಕ್ರವಾರ ಕಠಿಣ ಕ್ರಮ ಜರುಗಿಸಿದೆ. ಗ್ರೋಕ್ ಬಳಸಿಕೊಂಡು ಕೆಲವು ವಿಕೃತರು ಅಶ್ಲೀಲ ಫೋಟೋ, ವಿಡಿಯೋಗಳನ್ನು ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ, ಇಂಥ ಅಂಶಗಳನ್ನು ಕೂಡಲೇ ತೆಗೆದು ಹಾಕಬೇಕು ಹಾಗೂ ಇದರ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ ಎಂದು 72 ತಾಸಿನಲ್ಲಿ ವರದಿ ನೀಡಬೇಕು ಎಂದು ಕೇಂದ್ರ ಐಟಿ ಸಚಿವಾಲಯವು ಎಲಾನ್ ಮಸ್ಕ್ ಮಾಲೀಕತ್ವದ ‘ಎಕ್ಸ್’ಗೆ ನೋಟಿಸ್ ನೀಡಿದೆ.ಕಳೆದ 2-3 ದಿನಗಳಿಂದ ಹಲವು ಟ್ವೀಟರ್ (ಎಕ್ಸ್) ಖಾತೆದಾರರು ಮಹಿಳೆಯರು/ಪುರುಷರ ಫೋಟೋ ಹಾಕಿ, ‘ಇವರಿಗೆ ಬಿಕಿನಿ ಹಾಕು. ಇವರನ್ನು ಬೆತ್ತಲೆ ಮಾಡಿ ತೋರಿಸು’ ಎಂದು ಗ್ರೋಕ್‌ಗೆ ಕೇಳುತ್ತಿದ್ದರು. ಇನ್ನು ಕೆಲವರು ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿ ಕೆಲವರ ಚಿತ್ರ ಹಾಕಿ ವಿಕೃತ ಪ್ರಶ್ನೆಗಳನ್ನು ಕೇಳುತ್ತಿದ್ದರು. ಗ್ರೋಕ್ ಅವರು ಹೇಳಿದ್ದನ್ನೆಲ್ಲ ಪಾಲಿಸಿ ಅವರಿಗೆ ಬೇಕಾದ ಅಶ್ಲೀಲ/ಆಕ್ಷೇಪಾರ್ಹ ಫೋಟೋಗಳು ಮತ್ತು ಅಂಶಗಳನ್ನು ಒದಗಿಸುತ್ತಿತ್ತು. ವಿಶೇಷವಾಗಿ ಬೇನಾಮಿ ಖಾತೆದಾರರು ಇದನ್ನು ಕೆಟ್ಟ ಚಟವನ್ನಾಗಿ ಮಾಡಿಕೊಂಡು ವಿಕೃತ ಆನಂದ ಅನುಭವಿಸುತ್ತಿದ್ದರು.
ಈ ಸಂಬಂಧ ಕೇಂದ್ರ ಐಟಿ ಸಚಿವ ಸಚಿವ ವೈಷ್ಣವ್‌ಗೆ ಪತ್ರ ಬರೆದಿದ್ದ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಈ ವಿಕೃತ ಚಟುವಟಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಜತೆಗೆ ಅನೇಕ ನೆಟ್ಟಿಗರು ಗ್ರೋಕ್‌ನಂಥ ಕೃತಕ ಬುದ್ಧಿಮತ್ತೆ ತಾಣಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದ್ದರು.ಕೇಂದ್ರ ಸರ್ಕಾರ ಕಠಿಣ ಕ್ರಮ:
ಈ ಆಗ್ರಹದ ಬೆನ್ನಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಚಿವಾಲಯವು ಎಕ್ಸ್‌ಗೆ ನೋಟಿಸ್ ನೀಡಿದೆ. 2020 ಹಾಗೂ 2021ರ ಐಟಿ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ಶಾಸನಬದ್ಧ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪಗಳನ್ನು ಗುರುತಿಸಿದೆ.‘ಎಕ್ಸ್ ವೇದಿಕೆಯ ಎಐ ಪರಿಕರವಾದ ಗ್ರೋಕ್ ಅನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ, ಲೈಂಗಿಕ ಮತ್ತು ಅವಹೇಳನಕಾರಿ ವಿಷಯವನ್ನು ಪ್ರಸಾರ ಮಾಡಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಉತ್ಪಾದಿಸುವ ಮತ್ತು ಪ್ರಸಾರ ಮಾಡುವ ಬಗ್ಗೆ ಅಂಶಗಳು ಕಳವಳಕಾರಿ. ಇದು ಘನತೆ, ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತೆಯ ಗಂಭೀರ ಉಲ್ಲಂಘನೆಯಾಗಿದೆ’ ಎಂದು ಕಿಡಿಕಾರಿದೆ.‘ಗ್ರೋಕ್‌ನ ತಾಂತ್ರಿಕ ಹಾಗೂ ಆಡಳಿತಾತ್ಮಕ ಅಂಶಗಳನ್ನು ತಕ್ಷಣವೇ ಪರಿಶೀಲಿಸಬೇಕು. ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕ ವಿಷಯಗಳ ಸೃಷ್ಟಿ, ಪ್ರಸರಣ, ಹಂಚಿಕೆ ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಗಟ್ಟಲು ಕ್ರಮ ಜರುಗಿಸಬೇಕು. ಎಲ್ಲಾ ಕಾನೂನುಬಾಹಿರ ಅಂಶಗಳನ್ನು ತೆಗೆದುಹಾಕಬೇಕು ಹಾಗೂ ಆಕ್ಷೇಪಾರ್ಹ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. 72 ಗಂಟೆಗಳ ಒಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.‘ಐಟಿ ನಿಯಮಗಳನ್ನು ಅನುಸರಿಸದೇ ನಿರ್ಲಕ್ಷಿಸಿದರೆ ಐಟಿ ಕಾಯ್ದೆಯ ಅಡಿ ಹಾಗೂ ಸೈಬರ್/ಕ್ರಿಮಿನಲ್ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಅಡಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಚಿವಾಲಯ ಎಚ್ಚರಿಸಿದೆ.