ಸಾರಾಂಶ
ಮುಂಬೈ/ಹೈದರಾಬಾದ್:
ಕರ್ನಾಟಕದ ರೀತಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿರುವ ಮಹಾರಾಷ್ಟ್ರ ಹಾಗೂ ತೆಲಂಗಾಣ ಸರ್ಕಾರಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿವೆ ಎಂಬ ಮಾಹಿತಿ ಲಭಿಸಿದೆ.ಮಹಾರಾಷ್ಟ್ರ ಸರ್ಕಾರದ ಮೇಲೆ ಇದೇ ಮೊದಲ ಬಾರಿ ದಾಖಲೆಯ ₹9.3 ಲಕ್ಷ ಕೋಟಿ ಸಾಲದ ಹೊರೆ ಬಿದ್ದಿದ್ದು, 2026-27ನೇ ಸಾಲಿನಲ್ಲಿ 45,891 ಕೋಟಿ ರು. ಆದಾಯ ಕೊರತೆಯನ್ನು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಹೀಗಾಗಿ ಸ್ತ್ರೀ ಮಾಸಾಶನ ಏರಿಕೆ ಹಾಗೂ ರೈತ ಸಾಲ ಮನ್ನಾಗೆ ತಡೆ ನೀಡಲಾಗಿದೆ.
ಇನ್ನೊಂದೆಡೆ, ‘ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮಲ್ಲಿ ಬಂಡವಾಳ ವೆಚ್ಚಕ್ಕೆ ಹಣವಿಲ್ಲ. ಉದ್ಯೋಗಿಗಳಿಗೆ ಸಂಬಳ ನೀಡಿದ ಬಳಿಕ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನನ್ನ ಬಳಿ ಕೇವಲ ತಿಂಗಳಿಗೆ 5,000 ಕೋಟಿ ರು.ಗಳು ಮಾತ್ರ ಉಳಿಯುತ್ತವೆ. ಮುಂದಿನ ದಿನಗಳಲ್ಲಿ ಗತಿ ಏನಾಗಬಹುದೆಂದು ಗೊತ್ತಿಲ್ಲ. ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ತಮ್ಮ ಗ್ರಹಿಕೆ ಬದಲಾಯಿತು’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.ಮಹಾರಾಷ್ಟ್ರದ ಸ್ಥಿತಿ:
ಮಹಿಳೆಯರಿಗೆ ಅರ್ಧ ದರದಲ್ಲಿ ಬಸ್ ಟಿಕೆಟ್, ಮಹಿಳೆಯರಿಗೆ ಮಾಸಾಶನ ಸೇರಿ ಸಾಕಷ್ಟು ಪುಕ್ಕಟೆ ಯೋಜನೆ ಭರವಸೆ ನಿಡಿದ್ದ ಮಹಾರಾಷ್ಟ್ರದಲ್ಲಿ ಸಾಲದ ಪ್ರಮಾಣ ಹೆಚ್ಚಳ ಹಾಗೂ ಆದಾಯ ಕೊರತೆ ಉಂಟಾಗಿದೆ. ಹೀಗಾಗಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಮಹತ್ವಾಕಾಂಕ್ಷೆಯ ಚುನಾವಣೆ ಘೋಷಣೆಗಳಿಗೆ ನಿರೀಕ್ಷಿತ ಹಣ ಲಭಿಸಿಲ್ಲ.ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ ನೀಡುವ ಸ್ಟೈಪೆಂಡ್ ಅನ್ನು 1500 ರಿಂದ 2100 ರು.ಗೆ ಏರಿಸುವ ಹಾಗೂ ರೈತರ ಸಾಲಮನ್ನಾ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಲಡ್ಕಿ ಬಹಿನ್ ಯೋಜನೆಯ ₹10 ಸಾವಿರ ಕೋಟಿ ಕಡಿತ ಮಾಡಿ 36 ಸಾವಿರ ಕೋಟಿ ರು.ಗೆ ನಿಗದಿ ಮಾಡಲಾಗಿದೆ.
ಅದರ ಬದಲು ಹಾಲಿ ಯೋಜನೆಗಳಿಗೆ ಆದ್ಯತೆ ನೀಡಿ, ಸಾಲ ಮತ್ತು ವಿತ್ತೀಯ ಕೊರತೆಯು ನಿಗದಿಪಡಿಸಿದ ಮಿತಿಯೊಳಗಿರುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.ತೆಲಂಗಾಣ ದುಃಸ್ಥಿತಿ:
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಫ್ರೀ ವಿದ್ಯುತ್ ಸೇರಿ ಹಲವು ಭರವಸೆ ನೀಡಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಆರ್ಥಿಕ ಸಂಕಟಕ್ಕೆ ಒಳಗಾಗಿದೆ.‘ನಮ್ಮಲ್ಲಿ ಬಂಡವಾಳ ವೆಚ್ಚಕ್ಕೆ ಹಣವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಗತಿ ಏನಾಗಬಹುದು? ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮಾರಂಭವೊಂದರಲ್ಲಿ ಕಳೆದ ವಾರ ಕೇಳಿದ್ದಾರೆ.
‘ತೆಲಂಗಾಣ ತಿಂಗಳಿಗೆ 18,500 ಕೋಟಿ ರು. ಗಳಿಸುತ್ತಿದೆ. ಇದರಲ್ಲಿ ಗಣನೀಯ ಮೊತ್ತವನ್ನು ಮರುಕಳಿಸುವ ವೆಚ್ಚಗಳಿಗೆ ಮೀಸಲಿಡಲಾಗಿದೆ. ನಾವು ತಿಂಗಳಿಗೆ 6,500 ಕೋಟಿ ರು. ಸಂಬಳ ಮತ್ತು ಪಿಂಚಣಿಯಾಗಿ ಪಾವತಿಸುತ್ತೇವೆ. ತಿಂಗಳಿಗೆ 6,500 ಕೋಟಿ ರು. ಸಾಲ ಮತ್ತು ಬಡ್ಡಿಯಾಗಿಯೂ ಪಾವತಿಸುತ್ತೇವೆ. ಅಂದರೆ ಪ್ರತಿ ತಿಂಗಳ 10ನೇ ತಾರೀಖಿನ ಮೊದಲು 13,000 ಕೋಟಿ ರು.ಗಳು ಖರ್ಚಾಗುತ್ತವೆ. ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನಮ್ಮ ಬಳಿ ಕೇವಲ 5,000 ಕೋಟಿ ರು. ಮಾತ್ರ ಉಳಿಯುತ್ತವೆ. ಬಂಡವಾಳ ವೆಚ್ಚಕ್ಕೆ ಹಣವಿರುವುದಿಲ್ಲ’ ಎಂದಿದ್ದಾರೆ.‘ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ನನ್ನ ಗ್ರಹಿಕೆ ಬದಲಾಯಿತು. ನಾನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತ ನಂತರ, ಸತ್ಯ ತಿಳಿದುಕೊಂಡೆ’ ಎಂದು ಒಪ್ಪಿಕೊಂಡ ರೆಡ್ಡಿ, ಕಲ್ಯಾಣ ಖಾತರಿಗಳ ಕಾರ್ಯಸಾಧ್ಯತೆಯ ಕುರಿತು ರಾಷ್ಟ್ರವ್ಯಾಪಿ ಚರ್ಚೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.