ಅಸಂಸದೀಯ ಪದ ಬಳಕೆ: ಖರ್ಗೆ ವಿವಾದ

| Published : Mar 12 2025, 12:46 AM IST

ಸಾರಾಂಶ

ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡದ ತಮಿಳುನಾಡು ಸರ್ಕಾರವನ್ನು ಅನಾಗರಿಕ, ಅಪ್ರಾಮಾಣಿಕ ಎಂದೆಲ್ಲ ಟೀಕೆ ಮಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಸಂಸದೀಯ ಪದ ಬಳಸಿದ್ದು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಆಕ್ರೋಶ ಹಾಗೂ ಉಪಸಭಾಪತಿ ಹರಿವಂಶ್‌ ಅವರ ಅಸಮಾಧಾನದ ಬಳಿಕ ಖರ್ಗೆ ಕ್ಷಮೆಯಾಚಿಸಿದರು.

ನವದೆಹಲಿ: ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮಾಡದ ತಮಿಳುನಾಡು ಸರ್ಕಾರವನ್ನು ಅನಾಗರಿಕ, ಅಪ್ರಾಮಾಣಿಕ ಎಂದೆಲ್ಲ ಟೀಕೆ ಮಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಸಂಸದೀಯ ಪದ ಬಳಸಿದ್ದು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಆಕ್ರೋಶ ಹಾಗೂ ಉಪಸಭಾಪತಿ ಹರಿವಂಶ್‌ ಅವರ ಅಸಮಾಧಾನದ ಬಳಿಕ ಖರ್ಗೆ ಕ್ಷಮೆಯಾಚಿಸಿದರು.

ನೂತನ ಶಿಕ್ಷಣ ನೀತಿ ಬಗ್ಗೆ ಚರ್ಚೆ ರಾಜ್ಯಸಭೆಯಲ್ಲಿ ಆರಂಭವಾದಾಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಇರಲಿಲ್ಲ. ಆಗ ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಹೇಳುವ ಭರದಲ್ಲಿ, ಸಭಾಪತಿಗಳು ಹಾಗೂ ಶಿಕ್ಷಣ ಸಚಿವರ ಬಗ್ಗೆ ಅಸಂಸದೀಯ ಪದ ಬಳಸಿದರು. ಹೀಗಾಗಿ ಕೋಲಾಹಲ ಉಂಟಾಯಿತು ಹಾಗೂ ಹರಿವಂಶ ಅವರೂ ಖರ್ಗೆ ಮಾತಿನಿಂದ ಅವಾಕ್ಕಾದರು. ಖರ್ಗೆ ಕ್ಷಮೆಗೆ ಸಭಾನಾಯಕ ಜೆ.ಪಿ. ನಡ್ಡಾ ಆಗ್ರಹಿಸಿದರು.

ಆಗ ಉತ್ತರಿಸಿದ ಖರ್ಗೆ. ‘ನನ್ನ ಮಾತು ನಿಂದನೀಯವಾಗಿದ್ದರೆ ಅವನ್ನು ಹಿಂಪಡೆಯುತ್ತೇನೆ. ಕ್ಷಮೆ ಕೇಳುವೆ. ನಾನು ಟೀಕಿಸಿದ್ದು ಸರ್ಕಾರವನ್ನೇ ಹೊರತು ಪೀಠವನ್ನಲ್ಲ’ ಎಂದು ಉಪಸಭಾಪತಿಗಳಲ್ಲಿ ಕೋರಿದರು. ಆದರೆ, ‘ಒಂದು (ತಮಿಳುನಾಡು) ಸರ್ಕಾರವನ್ನು ಅನಾಗರಿಕ ಎಂದಿದ್ದ ಸಚಿವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ, ‘ಖರ್ಗೆ ಕ್ಷಮೆ ಕೇಳಿದ್ದು ಸ್ವಾಗತಾರ್ಹ. ಆದರೆ ಅವರ ಮಾತು ಸರ್ಕಾರವನ್ನು ಉದ್ದೇಶಿಸಿದ್ದರೆ ಖಂಡನಾರ್ಹ’ ಎಂದರು.