ಆಂಧ್ರಕ್ಕೆ ಮಾತ್ರ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಓಕೆ

| Published : Jul 25 2024, 01:17 AM IST

ಸಾರಾಂಶ

ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಭರಪೂರ ಕೊಡುಗೆಗಳು ಸಿಕ್ಕ ಮರುದಿನವೇ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ಆಂಧ್ರದಲ್ಲಿ ಬೆಳೆದ ಹೆಚ್ಚುವರಿ ತಂಬಾಕನ್ನು ಯಾವುದೇ ಸೇವಾ ಶುಲ್ಕವಿಲ್ಲದೇ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.

ಏನಿದರ ಮಹತ್ವ?

ನಿಯಮದ ಅನುಸಾರ ತಂಬಾಕು ಬೆಳೆಯಲು ರೈತರು ನೋಂದಣಿ ಮಾಡಿಸಿಕೊಂಡಿರಬೇಕು ಹಾಗೂ ಇಂತಿಷ್ಟು ಪ್ರಮಾಣದ ತಂಬಾಕು ಮಾತ್ರ ಮಾರಬೇಕು ಎಂಬ ಷರತ್ತು ಇದೆ. ಹೆಚ್ಚುವರಿ ತಂಬಾಕು ಮಾರಾಟಕ್ಕೆ ಅವಕಾಶವಿಲ್ಲ. ಆದರೆ ಆಂಧ್ರಕ್ಕೆ ಮಾತ್ರ ಈಗ ವಿನಾಯ್ತಿ ನೀಡಲಾಗಿದೆ. ಆಂಧ್ರ ಮತ್ತು ಕರ್ನಾಟಕ ಅತಿಹೆಚ್ಚು ತಂಬಾಕು ಬೆಳೆಯುವ ರಾಜ್ಯಗಳು.

----ನವದೆಹಲಿ: ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಭರಪೂರ ಕೊಡುಗೆಗಳು ಸಿಕ್ಕ ಮರುದಿನವೇ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ಆಂಧ್ರದಲ್ಲಿ ಬೆಳೆದ ಹೆಚ್ಚುವರಿ ತಂಬಾಕನ್ನು ಯಾವುದೇ ಸೇವಾ ಶುಲ್ಕವಿಲ್ಲದೇ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಂಧ್ರಕ್ಕೆ ಅಪ್ಪಳಿಸಿದ್ದ ಮೈಚಾಂಗ್‌ ಚಂಡಮಾರುತದಿಂದಾಗಿ 15,028.09 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಅಪಾರ ಪ್ರಮಾಣದ ತಂಬಾಕು ನಷ್ಟವಾಗಿತ್ತು. ಇದಕ್ಕಾಗಿ ರೈತರು ಹೆಚ್ಚು ವ್ಯಯ ಮಾಡಬೇಕಾಯಿತು. ಈ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಬೆಳೆದ ಎಫ್‌ಸಿವಿ ಮಾದರಿ ತಂಬಾಕನ್ನು ಹರಾಜಿನಲ್ಲಿ ಯಾವುದೇ ಅಧಿಕ ಶುಲ್ಕವಿಲ್ಲದೇ ಮಾರಲು ಅವಕಾಶ ಕಲ್ಪಿಸಿದೆ. ಈ ಹಣದಿಂದ ರೈತರು ತಮ್ಮ ನಷ್ಟವನ್ನು ಭರಿಸಿಕೊಳ್ಳಲು ಅನುಕೂಲ ಕಲ್ಪಿಸಿ ಕೇಂದ್ರ ವಾಣಿಜ್ಯ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾತ್ರವೇ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಎಫ್‌ಸಿವಿ ತಂಬಾಕು ಬೆಳೆಯುತ್ತವೆ.

ನಿಯಮದ ಅನುಸಾರ ತಂಬಾಕು ಬೆಳೆ ಬೆಳೆಯಲು ರೈತರು ನೋಂದಣಿ ಮಾಡಿಸಿಕೊಂಡಿರಬೇಕು ಹಾಗೂ ಇಂತಿಷ್ಟು ಪ್ರಮಾಣದ ತಂಬಾಕು ಮಾತ್ರ ಮಾರಬೇಕು ಎಂಬ ಷರತ್ತು ಇದೆ. ಹೆಚ್ಚುವರಿ ತಂಬಾಕು ಮಾರಾಟಕ್ಕೆ ಅವಕಾಶವಿಲ್ಲ. ಆದರೆ ಚಂಡಮಾರುತದಿಂದ ಆದ ಬೆಳೆಹಾನಿ ಸರಿದೂಗಿಸಲು ಈ ನಿಯಮ ಸಡಿಲಿಸಿ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಅವಕಾ ನೀಡಿದೆ.

ಆಂಧ್ರಪ್ರದೇಶದಲ್ಲಿ ಈ ಬೆಳೆ ಹಂಗಾಮಿನಲ್ಲಿ 43,125 ರೈತರು 97,127.07 ಹೆಕ್ಟೇರ್ ಪ್ರದೇಶದಲ್ಲಿ ಎಫ್‌ಸಿವಿ ತಂಬಾಕನ್ನು ಬೆಳೆದಿದ್ದಾರೆ ಹಾಗೂ 205.5 ದಶಲಕ್ಷ ಕೇಜಿ ತಂಬಾಕು ಉತ್ಪಾದಿಸಿದ್ದಾರೆ.