ಸಾರಾಂಶ
ನವದೆಹಲಿ : ದೇಶದಲ್ಲಿ ಸ್ಟಾರ್ಟಪ್ ಕಂಪನಿಗಳ ಬೆಳವಣಿಗೆಗೆ ತೊಡಕಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದ್ದ ‘ಏಂಜೆಲ್ ಟ್ಯಾಕ್ಸ್’ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ರದ್ದುಗೊಳಿಸಿದ್ದಾರೆ. ದೇಶದಲ್ಲಿ ಉದಯೋನ್ಮುಖ ಉದ್ದಿಮೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲ ಬಗೆಯ ಹೂಡಿಕೆದಾರರಿಗೆ ವಿಧಿಸಲಾಗುತ್ತಿದ್ದ ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಏನಿದು ಏಂಜೆಲ್ ಟ್ಯಾಕ್ಸ್?
ದೇಶದಲ್ಲಿ ನೋಂದಣಿಯಾಗಿಲ್ಲದ ಕಂಪನಿಗಳು ಹೂಡಿಕೆದಾರರಿಗೆ ತಮ್ಮ ಷೇರುಗಳನ್ನು ಹಂಚಿಕೆ ಮಾಡಿ ಸಂಗ್ರಹಿಸುತ್ತಿದ್ದ ಬಂಡವಾಳದ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯೇ ಏಂಜೆಲ್ ಟ್ಯಾಕ್ಸ್. ಮಾರುಕಟ್ಟೆಯ ನ್ಯಾಯ ಸಮ್ಮತ ದರಕ್ಕಿಂತ ಹೆಚ್ಚಿನ ಬೆಲೆಗೆ ಷೇರುಗಳನ್ನು ಖರೀದಿಸುವ ಹೂಡಿಕೆದಾರರನ್ನೇ ಗುರಿಯಾಗಿಸಿಕೊಂಡು ಈ ತೆರಿಗೆ ವಿಧಿಸಲಾಗುತ್ತಿತ್ತು.
2012ರಲ್ಲಿ ಯುಪಿಎ ಸರ್ಕಾರ ಇದ್ದಾಗ ಜಾರಿಗೆ ಬಂದ ತೆರಿಗೆ ಇದು. ಭಾರತೀಯ ಕಂಪನಿಗಳು ನೋಂದಾಯಿತವಲ್ಲದ ಕಂಪನಿಗಳಲ್ಲಿ ಮಾಡುವ ಹೂಡಿಕೆಗೆ ಇದು ಅನ್ವಯವಾಗುತ್ತಿತ್ತು. ಅಕ್ರಮ ಹಣ ವರ್ಗಾವಣೆ ಹಾಗೂ ಲೆಕ್ಕವಿಲ್ಲದ ಹಣ ವರ್ಗಾವಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ತೆರಿಗೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದು ಸ್ಟಾರ್ಟಪ್ ಕಂಪನಿಗಳು ಹಾಗೂ ಅದರ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತದೆ. ನಾವೀನ್ಯತೆ ಹಾಗೂ ನಿಧಿ ಸಂಗ್ರಹಕ್ಕೆ ಅಡ್ಡಿಯಾಗುತ್ತದೆ ಎಂಬ ಕಳವಳ ವ್ಯಕ್ತವಾಗಿತ್ತು.
ಈ ನಡುವೆ 2023-24ನೇ ಸಾಲಿನಿಂದ ವಿದೇಶಿ ಹೂಡಿಕೆ ಮೇಲೂ ಏಂಜೆಲ್ ಟ್ಯಾಕ್ಸ್ ಹೇರಲಾಗಿತ್ತು.