ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಕನಿಷ್ಠ ವೇತನ ₹1,035ಕ್ಕೆ ಹೆಚ್ಚಳ: ಕೇಂದ್ರ ಸರ್ಕಾರ ಆದೇಶ

| Published : Sep 27 2024, 01:18 AM IST / Updated: Sep 27 2024, 06:54 AM IST

ಸಾರಾಂಶ

ಜೀವನ ವೆಚ್ಚ ಏರಿಕೆಯನ್ನು ನಿಭಾಯಿಸಲು ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು ₹1,035ಕ್ಕೆ ಹೆಚ್ಚಿಸಿದೆ. ಹೊಸ ದರ ಅಕ್ಟೋಬರ್ 1 ರಿಂದ ಜಾರಿಗೆ ಬಂದಿದ್ದು, ಕೌಶಲ್ಯ ಮತ್ತು ಭೌಗೋಳಿಕ ಪ್ರದೇಶವನ್ನು ಆಧರಿಸಿ ವೇತನ ನಿಗದಿಪಡಿಸಲಾಗಿದೆ.

ನವದೆಹಲಿ: ದಿನೇದಿನೇ ಏರಿಕೆಯಾಗುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಕನಿಷ್ಠ ವೇತನ ದರವನ್ನು 1,035 ರು.ವರೆಗೂ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವೇರಿಯಬಲ್‌ ಡಿಯರ್‌ನೆಸ್‌ ಅಲೊಯನ್ಸ್‌ ಪರಿಷ್ಕರಿಸುವ ಮೂಲಕ ಈ ಹೆಚ್ಚಳ ಮಾಡಲಾಗಿದೆ. ಹೊಸ ದರ ಅ.1ರಿಂದ ಜಾರಿಗೆ ಬರಲಿದೆ.

ಹೊಸ ವೇತನದ ಪ್ರಕಾರ ಕೌಶಲ್ಯರಹಿತ ಕೆಲಸಗಾರರಿಗೆ ದಿನಕ್ಕೆ 783 ರು., ಅರೆಕುಶಲ ಕೆಲಸಗಾರರಿಗೆ 868 ರು., ಕೌಶಲ್ಯ ಬೇಡುವ ಕೆಲಸಗಳಿಗೆ 954 ರು. ಹಾಗೂ ಹೆಚ್ಚು ನುರಿತ ಕೆಲಸಗಳಿಗೆ 1,035 ರು. ನಿಗದಿಪಡಿಸಲಾಗಿದೆ.

ಹೊಸ ವೇತನವನ್ನು ಕೌಶಲ್ಯ, ಭೌಗೋಳಿಕ ಪ್ರದೇಶದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದಾಗಿ ಕಟ್ಟಡ ನಿರ್ಮಾಣ, ಲೋಡಿಂಗ್‌, ಕಾವಲು, ಗುಡಿಸುವುದು, ಸ್ವಚ್ಛಗೊಳಿಸುವುದು, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ಅಸಂಘಟಿತ ವಲಯದ ನೌಕರರಿಗೆ ಅನುಕೂಲವಾಗಲಿದೆ.

ವಿಡಿಎ ಅನ್ನು ಕೇಂದ್ರ ಸರ್ಕಾರ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದಲ್ಲಿ 6 ತಿಂಗಳ ಅವಧಿಗೆ ಅನ್ವಯಿಸುವಂತೆ ವರ್ಷದಲ್ಲಿ 2 ಬಾರಿ (ಏ,1 ಮತ್ತು ಅ.1) ಪರಿಷ್ಕರಿಸುತ್ತದೆ.