ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ರಮದಿಂದ ದೇಶದ ಚುನಾವಣಾ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇದರ ವಿರುದ್ಧ ವಿಪಕ್ಷಗಳ ಜೊತೆಗೂಡಿ ಜಂಟಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಏ.15ಕ್ಕೆ ವಿಪಕ್ಷಗಳ ಸಭೆ ಆಯೋಜಿಸಿದೆ.
ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಘೋಷಣೆ
ಕೇಂದ್ರದಿಂದ ನೀತಿ ಸಂಹಿತೆ ಉಲ್ಲಂಘನೆ: ಆರೋಪಕಾರ್ಯತಂತ್ರ ರೂಪಿಸಲು ಏ.15ಕ್ಕೆ ಸಭೆ ನಿಗದಿ
ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ರಮದಿಂದ ದೇಶದ ಚುನಾವಣಾ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇದರ ವಿರುದ್ಧ ವಿಪಕ್ಷಗಳ ಜೊತೆಗೂಡಿ ಜಂಟಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಏ.15ಕ್ಕೆ ವಿಪಕ್ಷಗಳ ಸಭೆ ಆಯೋಜಿಸಿದೆ.ಶುಕ್ರವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ (ಸಿಡಬ್ಲ್ಯುಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಘೋಷಣೆ ಮಾಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದ ಕ್ರಮಗಳಿಂದ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಮೋದಿ ಸರ್ಕಾರ ಏ.16ರಿಂದ ಅಧಿವೇಶನ ಕರೆಯುತ್ತಿದೆ. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಾಧ್ಯವಾದಷ್ಟು ಬೇಗ ಅಂಗೀಕರಿಸಲು ಅವರು ಮುಂದಾಗಿದ್ದಾರೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ವಿಪಕ್ಷದ ನಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಸಾಮೂಹಿಕ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ’ ಎಂದು ತಿಳಿಸಿದರು.ಏ.15ಕ್ಕೆ ವಿಪಕ್ಷಗಳ ಸಭೆ:
‘ಕೇಂದ್ರದ ವಿರುದ್ಧ ಜಂಟಿ ಹೋರಾಟ ಕೈಗೊಳ್ಳಲು ಏ.15ಕ್ಕೆ ಮಲ್ಲಿಕಾರ್ಜುನ ಖರ್ಗೆ ವಿಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಹೋರಾಟದ ಕಾರ್ಯತಂತ್ರಗಳನ್ನು ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.