ಸಾರಾಂಶ
ಚೆನ್ನೈ: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ, ರಾಮಾಯಣದಲ್ಲಿ ಬರುವ ರಾಮಸೇತುವಿನ ಮಾರ್ಗದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಸಮುದ್ರ ಸೇತುವೆಯೊಂದನ್ನು ಕಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ.
23 ಕಿ.ಮೀ ಉದ್ದದ ಈ ಪ್ರಸ್ತಾವಿತ ಸಮುದ್ರ ಸೇತುವೆಯಿಂದ ಉಭಯ ದೇಶಗಳ ನಡುವಿನ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಹೊಸ ಶಕ್ತಿ ಸಿಗಲಿದೆ ಎಂದು ಯೋಜನೆ ಪ್ರಸ್ತಾಪಿಸಿರುವ ಕೇಂದ್ರದ ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯ ಅಂದಾಜಿಸಿದೆ.
‘ಈ ಹೊಸ ರಾಮಸೇತು, ರಸ್ತೆ ಮತ್ತು ರೈಲು ಮಾರ್ಗವನ್ನು ಒಳಗೊಂಡಿರಲಿದ್ದು, ತಮಿಳುನಾಡಿನ ಧನುಷ್ಕೋಡಿ ಮತ್ತು ಶ್ರೀಲಂಕಾದ ತಲೈಮನ್ನಾರ್ ನಡುವೆ ಸಂಪರ್ಕ ಕಲ್ಪಿಸಲಿದೆ.
ಪಾಕ್ ಜಲಸಂಧಿಯ ಮೂಲಕ ಶ್ರೀಲಂಕಾಗೆ ಸಂಪರ್ಕ ಕಲ್ಪಿಸುವ ಮೂಲಕ ಸಾಗಣೆ ವೆಚ್ಚವನ್ನು ಶೇ.50ರಷ್ಟು ತಗ್ಗಿಸಲಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಮಾರ್ಗ ನಿರ್ಮಾಣಕ್ಕೆ 6 ತಿಂಗಳ ಹಿಂದೆಯೇ ಏಷ್ಯನ್ ಡೆವಲಪ್ ಬ್ಯಾಂಕ್ ಜೊತೆ ಮಾತುಕತೆ ನಡೆದಿದೆ. ಯೋಜನೆಗೆ 40 ಸಾವಿರ ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಧನುಷ್ಕೋಡಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಯೋಜನೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಶ್ರೀರಾಮ ನಿರ್ಮಾಣ ಮಾಡಿದ್ದ ರಾಮಸೇತು ಯೋಜನೆಯನ್ನು ಆಧರಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಮಾಯಣದಲ್ಲಿ ಬರುವ ರಾಮಸೇತುವನ್ನು ಹನುಮಂತನ ನೇತೃತ್ವದಲ್ಲಿ ವಾನರ ಸೇನೆ ನಿರ್ಮಿಸಿತ್ತು. ರಾವಣ ಅಪಹರಿಸಿದ್ದ ಸೀತೆಯನ್ನು ರಕ್ಷಿಸಲು ರಾಮನ, ಲಕ್ಷ್ಮಣರು ತೆರಳಲು ಈ ಸೇತುವೆ ನಿರ್ಮಿಸಲಾಗಿತ್ತು ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕವಾದಂತ ಕುರುಹುಗಳು ಈಗಲೂ ಉಪಗ್ರಹ ಚಿತ್ರಗಳಲ್ಲಿ ಕಾಣಬಹುದು.
₹40 ಸಾವಿರ ಕೋಟಿ ವೆಚ್ಚ?
ಭಾರತ ಮತ್ತು ಶ್ರೀಲಂಕಾ ನಡುವೆ ಸೇತುವೆ ನಿರ್ಮಾಣಕ್ಕೆ 6 ತಿಂಗಳ ಹಿಂದೆ ಏಷ್ಯನ್ ಡೆವಲಪ್ ಬ್ಯಾಂಕ್ ಜೊತೆ ಮಾತುಕತೆ ನಡೆದಿದೆ.
ಯೋಜನೆಗೆ 40 ಸಾವಿರ ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಧಾನಿ ಮೋದಿ ಅವರು ಧನುಷ್ಕೋಡಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಯೋಜನೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.