ಸಾರಾಂಶ
ನವದೆಹಲಿ: ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಯುವಕ - ಯುವತಿಯರಿಗೆ ಮಾಸಿಕ 5 ಸಾವಿರ ರು. (ವರ್ಷಕ್ಕೆ 66 ಸಾವಿರ ರು.) ಆರ್ಥಿಕ ನೆರವು ನೀಡುವ ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಕೇಂದ್ರ ಚಾಲನೆ ನೀಡಿದೆ. ಇದರಿಂದ 1.25 ಲಕ್ಷ ಯುವಕರಿಗೆ ನೆರವಾಗಲಿದೆ.ಉನ್ನತ ಕಂಪನಿಗಳಲ್ಲಿ 21ರಿಂದ 24 ವರ್ಷದ ಯುವಕ ಯುವತಿಯರಿಗೆ 1 ವರ್ಷದ ಇಂಟರ್ನ್‌ಶಿಪ್ ಅವಕಾಶವನ್ನು ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಇದು ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಘೋಷಣೆಯಾದ 5ನೇ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಇಂಟರ್ನ್‌ಶಿಪ್ ಮಾಡುವವರಿಗೆ ಮಾಸಿಕ 5 ಸಾವಿರ ರು. ಭತ್ಯೆ ಮತ್ತು ಒಂದು ಬಾರಿ ಸಹಾಯ ಭತ್ಯೆ 6 ಸಾವಿರ ರು. ವನ್ನು ಸರ್ಕಾರವೇ ಭರಿಸಲಿದೆ.
ಈ ಯೋಜನೆಯಡಿ ಯುವಕರನ್ನು ಇಂಟರ್ನ್‌ಶಿಪ್‌ಗೆ ಆಯ್ಕೆ ಮಾಡಿಕೊಳ್ಳಲು 500 ಕಂಪನಿಗಳು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿವೆ. ಆಯ್ಕೆಯಾದ ಯುವಕರಿಗೆ 5000 ರು.ನಲ್ಲಿ ಸರ್ಕಾರ 4500 ರು. ಹಾಗೂ ಕಂಪನಿಗಳು 500 ರು. ನೀಡಲಿವೆ.
ಆಯ್ಕೆ ವಿಧಾನ ಹೇಗೆ?:
www.pminternship.mca.gov.in ನಲ್ಲಿ ಯುವಕರು ಅ.12ರಿಂದ 25ರವರೆಗೆ ತಮ್ಮ ಹೆಸರು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಅ.26ರಂದು ಶಾರ್ಟ್‌ಲಿಸ್ಟ್ ಮಾಡಲಾಗುವುದು. ಅ.27ರಿಂದ ನ.7ರವರೆಗೆ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಲಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನ.8ರಿಂದ ನ.15ರವರೆಗೆ ಆಫರ್‌ಗೆ ಒಪ್ಪಿಗೆ ಸೂಚಿಸುವ ಅಧಿಕಾರವವಿದೆ ಎಂದು ಸರ್ಕಾರ ಹೇಳಿದೆ.
ಈ ನಡುವೆ, ಇದು ಉದ್ಯೋಗ ಅಲ್ಲ, ತರಬೇತಿ (ಇಂಟರ್ನ್‌ಶಿಪ್) ಮಾತ್ರ ಎಂದು ಅದು ಸ್ಪಷ್ಟಪಡಿಸಿದೆ.2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆ ಬಗ್ಗೆ ಘೋಷಿಸಿದ್ದರು. ಜೊತೆಗೆ ಕಂಪನಿಗಳು ತಮ್ಮ ಸಿಎಸ್‌ಆರ್ (ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯಿಂದ ಶೇ.10ರಷ್ಟು ತರಬೇತಿ ವೆಚ್ಚವನ್ನು ಭರಿಸುವ ನಿರೀಕ್ಷೆಯಿದೆ ಎಂದಿದ್ದರು.