ಸಾರಾಂಶ
ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸ್ಲ್ಯಾಬ್‌ಗಳ ಪುನರ್‌ರಚನೆಗೆ ಚಿಂತನೆ ನಡೆಸಿದೆ. ಈ ಪ್ರಕಾರ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸಬೇಕು ಎಂಬುದು ಒಂದು ಪ್ರಸ್ತಾಪ
ನವದೆಹಲಿ: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸ್ಲ್ಯಾಬ್‌ಗಳ ಪುನರ್‌ರಚನೆಗೆ ಚಿಂತನೆ ನಡೆಸಿದೆ. ಈ ಪ್ರಕಾರ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸಬೇಕು ಎಂಬುದು ಒಂದು ಪ್ರಸ್ತಾಪವಾದರೆ ಅಥವಾ ಶೇ.12ರ ಜಿಎಸ್ಟಿ ಸ್ಲ್ಯಾಬ್ ಅನ್ನೇ ಪೂರ್ತಿ ತೆಗೆದು ಹಾಕಬೇಕು ಎಂಬುದು ಇನ್ನೊಂದು ಪ್ರಸ್ತಾಪವಾಗಿದೆ.
ಈ ಬಗ್ಗೆ ಮಾಸಾಂತ್ಯಕ್ಕೆ ನಡೆಯುವ ಜಿಎಸ್‌ಟಿ ಮಂಡಳಿ ಸಭೆ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಅಗತ್ಯ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಇಳಿಕೆಯಬಹುದು ಎಂಬ ನಿರೀಕ್ಷೆ ಎದುರಾಗಿದೆ.
ಪ್ರಸ್ತುತ ಶೇ.12ರಷ್ಟು ತೆರಿಗೆಗೆ ಒಳಪಟ್ಟಿರುವ ವಸ್ತುಗಳು ಮಧ್ಯಮ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಸಾಮಾನ್ಯವಾಗಿ ಬಳಸುವಂತಹವು. ಅಂತಹ ಕೆಲ ಸರಕುಗಳ ಮೇಲಿನ ಶೇ.12 ರಷ್ಟು ಜಿಎಸ್‌ಟಿ ಸ್ಲ್ಯಾಬ್ ಅನ್ನು ಶೇ.5 ಕ್ಕೆ ಇಳಿಸುವುದು ಅಥವಾ ಶೇ.12 ಸ್ಲ್ಯಾಬ್ ಅನ್ನೇ ತೆಗೆದುಹಾಕುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಜತೆ ಮಾಸಾಂತ್ಯದಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ನ 56ನೇ ಸಭೆಯಲ್ಲಿ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ.
ಒಂದೊಮ್ಮೆ ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಇದು ಜಿಎಸ್‌ಟಿಯಲ್ಲಿ ಮಾಡಲಾದ ಮಹತ್ವದ ಪರಿಷ್ಕರಣೆಗಳಲ್ಲಿ ಒಂದಾಗಲಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವುದರ ಜತೆಗೆ, ಮುಂಬರುವ ಚುನಾವಣೆಗಳಲ್ಲೂ ರಾಜಕೀಯವಾಗಿ ಕೇಂದ್ರಕ್ಕೆ ಸಹಾಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಅಗ್ಗ ಆಗಬಹುದಾದ ವಸ್ತುಗಳು
ಟೂತ್‌ಪೇಸ್ಟ್, ಕೊಡೆ, ಹೊಲಿಗೆ ಯಂತ್ರ, ಕುಕ್ಕರ್, ಪಾತ್ರೆಗಳು, ಇಸ್ತ್ರಿ ಪೆಟ್ಟಿಗೆ, ಗೀಸರ್, ವಾಷಿಂಗ್ ಮಷಿನ್, ಸೈಕಲ್, 1000 ರು.ಗಿಂತ ಅಧಿಕ ಬೆಲೆಯ ಬಟ್ಟೆ, 500-1000 ರು. ಬೆಲೆಯ ಪಾದರಕ್ಷೆ, ಸ್ಟೇಷನರಿ ಸಾಮಗ್ರಿ, ಲಸಿಕೆ, ಸೆರಾಮಿಕ್ ಟೈಲ್ಸ್, ಕೃಷಿ ಉಪಕರಣಗಳು ಇತ್ಯಾದಿ.
- 12% ಜಿಎಸ್‌ಟಿ ಸ್ಲ್ಯಾಬ್‌ಗೆ ಸಂಪೂರ್ಣ ಕೊಕ್?
- ಮಾಸಾಂತ್ಯಕ್ಕೆ ಜಿಎಸ್ಟಿ ಕೌನ್ಸಿಲ್ ಸಭೆ ನಿರ್ಧಾರ
- ಜಿಎಸ್ಟಿ ಮಂಡಳಿ ಮುಂದೆ 2 ಪ್ರಸ್ತಾಪ. ಶೇ.12ರ ಜಿಎಸ್ಟಿ ಸ್ಲ್ಯಾಬ್ ಪೂರ್ಣ ರದ್ದು ಅಥವಾ ಶೇ.15ರಿಂದ ಶೇ.5ಕ್ಕೆ ಇಳಿಕೆ
- ಈ ಪೈಕಿ ಯಾವುದೇ ಆದರೂ ಲಸಿಕೆ, ಬಟ್ಟೆ, ಸೈಕಲ್, ಗೃಹ ಬಳಕೆಯ ಹಲವು ಉತ್ಪನ್ನಗಳ ದರದಲ್ಲಿ ಭಾರೀ ಇಳಿಕೆ
- ಈ ಪ್ರಸ್ತಾವ ಜಾರಿಯಾದರೆ 2017ರಲ್ಲಿ ಜಿಎಸ್ಟಿ ಜಾರಿ ಬಳಿಕ ಕಾಯ್ದೆಯಲ್ಲಿನ ಅತಿದೊಡ್ಡ ಬದಲಾವಣೆ ಎನ್ನಿಸಿಕೊಳ್ಳಲಿದೆ