60000 ಕೋಟಿ ರು. ವೆಚ್ಚದಲ್ಲಿ 90 ಸುಖೋಯ್‌ ಮೇಲ್ದರ್ಜೆಗೆ

| Published : Feb 21 2024, 02:01 AM IST

ಸಾರಾಂಶ

ಎಚ್‌ಎಎಲ್‌ನಿಂದ ಸುಖೋಯ್‌ ಉನ್ನತೀಕರಣ ಕಾರ್ಯ ನಡೆಯಲಿದ್ದು, ಡಿಆರ್‌ಡಿಒ ಸಹಕಾರ ನೀಡಲಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಸುಖೋಯ್‌ಗೆ ಹೊಸ ಸಲಕರಣೆ ಅಳವಡಿಕೆ ಮಾಡಲಾಗುತ್ತದೆ.

ನವದೆಹಲಿ: ರಷ್ಯಾ ಈ ಹಿಂದೆ ನಿರ್ಮಿಸಿದ್ದ 90 ಸುಖೋಯ್‌-30 ಎಂಕೆಐ ಯುದ್ಧವಿಮಾನಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಉನ್ನತೀಕರಣದ ಹೊಣೆಯನ್ನು ಅದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಗೆ ವಹಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದಕ್ಕೆ ಸಹಕಾರ ನೀಡಲಿದೆ.60 ಸಾವಿರ ಕೋಟಿ ರು. ಮೊತ್ತ ವಿನಿಯೋಗಿಸಿ ಹೊಸ ರಾಡಾರ್‌ಗಳು, ಮಿಷನ್‌ ನಿಯಂತ್ರಿತ ಸಿಸ್ಟಂಗಳು, ಎಲೆಕ್ಟ್ರಾನಿಕ್‌ ಯುದ್ಧ ಸಾಮರ್ಥ್ಯಗಳು ಹಾಗೂ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಸುಖೋಯ್‌ ಜೆಟ್‌ಗಳಿಗೆ ಅಳವಡಿಸಲಾಗುತ್ತದೆ. ಅಂದರೆ ಬದಲಾದ ಕಾಲಮಾನದಲ್ಲಿ ಆಧುನಿಕ ಯುದ್ಧ ತಂತ್ರಜ್ಞಾನವನ್ನು ಎಸ್‌ಯು-30 ಯುದ್ಧವಿಮಾನಗಳಿಗೆ ಅಳವಡಿಸುವ ಗುರಿ ಹೊಂದಲಾಗಿದೆ. ಆತ್ಮನಿರ್ಭರ ಭಾರತ ಘೋ಼ಷಣೆಯ ಅನುಸಾರ, ದೇಶಿ ಕಂಪನಿಗಳ ಖಾಸಗಿ ಸಹಭಾಗಿತ್ವ ಪಡೆದು ಕೂಡ ಇವನ್ನು ಉನ್ನತೀಕರಿಸಲಾಗುತ್ತದೆ.ಈ ಹಿಂದೆ ಅನೇಕ ಸುಖೋಯ್‌ ವಿಮಾನಗಳು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದವು. ಇದನ್ನೆಲ್ಲ ಈಗ ಸರಿಪಡಿಸಲಾಗುತ್ತದೆ. ಈ ವರ್ಷದೊಳಗೆ ಹೊಸ ವ್ಯವಸ್ಥೆಗಳನ್ನು ಸಂಯೋಜಿಸುವ ಕೆಲಸ ಆರಂಭವಾಗುವ ನಿರೀಕ್ಷೆಯಿದೆ.ಆರಂಭಿಕ ಹಂತದಲ್ಲಿ ಸುಮಾರು 90 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಭಾರತದಲ್ಲಿ ನಡೆಸಲಾಗುವುದು. ಶೇ.50ಕ್ಕೂ ಹೆಚ್ಚು ಸ್ಥಳೀಯ ಉಪಕರಣಗಳನ್ನು ಬಳಸಿ, ಎಚ್ಎಎಲ್ ಇವುಗಳನ್ನು ಮೇಲ್ದರ್ಜೆಗೇರಿಸಲಿದೆ. ಉಳಿದವನ್ನು ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಅಲ್ಜೀರಿಯಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.