ಸಾರಾಂಶ
ಚಂಡೀಗಢ: ಗೋವು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು 30 ಕಿ.ಮೀ ತನಕ ಹಿಂಬಾಲಿಸಿ, ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.
ಆ.23ರಂದೇ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಆರ್ಯನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ದಾಳಿ ನಡೆಸಿ ಪರಾರಿಯಾಗಿದ್ದ ಐವರನ್ನು ಬಂಧಿಸಲಾಗಿದೆ. ಈ ನಡುವೆ ಇದೊಂದು ಪೂರ್ವ ಯೋಜಿತ ಸಂಚು. ದಾಳಿಗೊಳಗಾದ ಕಾರಿನಲ್ಲಿ ಆರ್ಯನ್ ಜೊತೆಗಿದ್ದ ಬಾಲಕ ಕೂಡಾ ಈ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿರುವ ಕಾರಣ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆಗಿದ್ದೇನು?:ನಗರದಲ್ಲಿ ರೆನಾಲ್ಟ್ ಡಸ್ಟರ್, ಟೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಕಿಡಿಗೇಡಿಗಳು ದನಗಳ ಕಳ್ಳತನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಗೋವು ರಕ್ಷಕರ ಗುಂಪಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡುವ ವೇಳೆ ದೆಹಲಿ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಸ್ಟರ್ ಕಾರಿನಲ್ಲಿ ಗುಂಪೊಂದು ತೆರಳುತ್ತಿರುವುದು ಕಂಡುಬಂತು.ಅದೇ ಕಾರನ್ನು ಗೋಕಳ್ಳರ ಕಾರೆಂದು ಭಾವಿಸಿದ ತಂಡ, ಅವರನ್ನು ದಿಲ್ಲಿ-ಆಗ್ರಾ ನಡುವಿನ ಹೆದ್ದಾರಿಯಲ್ಲಿ 30 ಕಿ.ಮೀ ದೂರದವರೆಗೆ ಕಾರನ್ನು ಹಿಂಬಾಲಿಸಿದೆ.
ಕಾರು ನಿಲ್ಲಿಸುವುದಕ್ಕೆ ಸೂಚಿಸಿದೆ. ಆದರೆ ಆರ್ಯನ್ ಹಾಗೂ ಸ್ನೇಹಿತರು ಭಯದಿಂದ ಕಾರನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಕಾರಿನತ್ತ ಆರೋಪಿಗಳು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಯನ್ ಕುತ್ತಿಗೆಗೆ ಗುಂಡು ತಗುಲಿದೆ. ಆ ಬಳಿಕ ಆರ್ಯನ್ ಚಲಿಸುತ್ತಿದ್ದ ಕಾರಿನ ಬಾಗಿಲು ತೆಗೆಯಲಾಗಿದೆ. ಈ ಸಂದರ್ಭದಲ್ಲಿ ಗೋರಕ್ಷಕರ ಗುಂಪು, ಆರ್ಯನ್ ತಂಡ ತಮ್ಮ ಮೇಲೆ ಪ್ರತಿದಾಳಿ ನಡೆಸಬಹುದು ಎಂದು ಭಯಗೊಂಡು , ಮತ್ತೆ ಗುಂಡು ಹಾರಿಸಿದೆ. ಈ ವೇಳೆ ಆರ್ಯನ್ ಎದೆಗೆ ಗುಂಡು ತಗುಲಿದೆ. ಬಳಿಕ ಕಾರಿನಲ್ಲಿ ಇಬ್ಬರು ಹುಡುಗಿಯರು ಇರುವುದನ್ನು ನೋಡಿ, ತಪ್ಪಾಗಿ ಗುಂಡು ಹಾರಿಸಿರುವುದು ಗೋರಕ್ಷಕರ ಗುಂಪಿಗೆ ಅರಿವಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಐವರನ್ನು ಬಂಧಿಸಿದ್ದಾರೆ.
ಪೂರ್ವ ಯೋಜಿತ ಸಂಚು:
ಈ ನಡುವೆ ಘಟನೆ ಕುರಿತು ಹೊಸ ಆರೋಪ ಮಾಡಿರುವ ಆರ್ಯನ್ ತಂದೆ, ಇದೊಂದು ಪೂರ್ವ ಯೋಜಿತ ಸಂಚು. ಕಾರಿನಲ್ಲಿ ನನ್ನ ಮಗನ ಜೊತೆಗಿದ್ದ ಬಾಲಕ ಕೂಡಾ ಇದರಲ್ಲಿ ಭಾಗಿಯಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಹೀಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.