ಸಾರಾಂಶ
ಡೆಲ್ಲಿ ಮಂಜು
ಹಾಥ್ರಸ್ (ಉ.ಪ್ರ.) : ಬಿಳಿಬಟ್ಟೆಯೊಂದರಲ್ಲಿ ಸುತ್ತಿಟ್ಟ ಎಂಟು ತಿಂಗಳ ಹಸುಗೂಸು. ದೇವರ ಅನುಗ್ರಹದೊಂದಿಗೆ ಎಂಟು ತಿಂಗಳ ಹಿಂದಷ್ಟೇ ಪೋಷಕರ ಮಡಿಲು ಸೇರಿದ್ದ ಮಗು ಅದು. ಅಮ್ಮನ ಒತ್ತಾಸೆಯೋ ಅಥವಾ ಅಪ್ಪನ ಅಭಿಲಾಷೆಯೋ ಗೊತ್ತಿಲ್ಲ, ಮೌಢ್ಯದ ಯಜಮಾನ ಬೋಲೆ ಬಾಬಾ ಕರೆದರು ಎಂಬ ಕಾರಣಕ್ಕೆ ಪೋಷಕರ ಜೊತೆ ಬಂದಿತ್ತು. ಚರಣಧೂಳಿನ ಆಸೆಗೆ ಬಿದ್ದ ಅಂಧ ಶ್ರದ್ಧಾಳುಗಳಿಂದಾಗಿ ಕಾಲ್ತುಳಿತಕ್ಕೆ ಸಿಕ್ಕಿ ಎಂಟೇ ತಿಂಗಳ ಅವಧಿಯಲ್ಲಿ ಮತ್ತೆ ಆಗ ಮಗು ದೇವರಪಾದ ಸೇರಿದೆ!
ಮಂಗಳವಾರ ಸಂಭವಿಸಿದ ನೂಕುನುಗ್ಗಲಿನಿಂದ ಕೊನೆಯುಸಿರೆಳೆದ ಹಸುಗೂಸಿಗೆ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ನಡೆಸಿ, ಪೋಷಕರಿಗೆ ಒಪ್ಪಿಸಲಾಯಿತು.
ಹೆಚ್ಚು ಕಡಿಮೆ 36 ಮೃತ ದೇಹಗಳ ಪೋಸ್ಟ್ ಮಾರ್ಟಂ ನಡೆದರೂ ಶವಾಗಾರ ಜಗ್ಗಿರಲಿಲ್ಲ. ಆದರೆ ಹಸುಗೂಸಿನ ದೇಹಕ್ಕೆ ಪೋಸ್ಟ್ ಮಾರ್ಟಂ ಸಲಕರಣೆಗಳು ಇಟ್ಟಾಗ ಒಮ್ಮೆ ಕಣ್ಣೀರು ಬಿದ್ದಂತಾಯಿತು. ಶವಾಗಾರಕ್ಕೆ ಮೃತದೇಹಗಳೆಲ್ಲ ವಿಶೇಷವಲ್ಲ. ಆದರೆ ಮೌಢ್ಯ ಬಿತ್ತುವ ಒಬ್ಬ ಬಾಬಾನ ಕರೆಗೆ ಓಗೊಟ್ಟು ತನ್ನದಲ್ಲದ ತಪ್ಪಿಗೆ ಉಸಿರು ಚೆಲ್ಲಿದ ಮಗುವನ್ನು ಕಂಡು ಇಡೀ ಶವಾಗಾರ ಮಾತ್ರ ಮಮ್ಮಲ ಮರುಗಿದಂತಿತ್ತು.