ಸಾರಾಂಶ
ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ವಿರುದ್ಧ ಜಂಟಿ ಹೋರಾಟದ ಎಚ್ಚರಿಕೆ ನೀಡುವ ಮೂಲಕವೇ ಆಡಳಿತಾರೂಢ ಬಿಜೆಪಿ- ಶಿವಸೇನೆ ಸರ್ಕಾರ ಮಣಿಸುವಲ್ಲಿ ಯಶಸ್ವಿಯಾಗಿದ್ದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಶನಿವಾರ ಇಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಮುಂಬೈ: ಪ್ರಾಥಮಿಕ ಶಾಲೆಯಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ವಿರುದ್ಧ ಜಂಟಿ ಹೋರಾಟದ ಎಚ್ಚರಿಕೆ ನೀಡುವ ಮೂಲಕವೇ ಆಡಳಿತಾರೂಢ ಬಿಜೆಪಿ- ಶಿವಸೇನೆ ಸರ್ಕಾರ ಮಣಿಸುವಲ್ಲಿ ಯಶಸ್ವಿಯಾಗಿದ್ದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಶನಿವಾರ ಇಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದಾರೆ. 20 ವರ್ಷಗಳ ಬಳಿಕ ಒಂದಾದ ಈ ಸೋದರರ ಶಕ್ತಿ ಪ್ರದರ್ಶನ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಮುನ್ಸೂಚನೆ ನೀಡಿದೆ.
ತ್ರಿಭಾಷಾ ಸೂತ್ರದ ವಿರುದ್ಧ ಹೋರಾಟದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ವರ್ಲಿಯಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ (ಉದ್ಧವ್ ಬಣ) ಮತ್ತು ರಾಜ್‌ಠಾಕ್ರೆ ಅವರ ಎಂಎನ್‌ಎಸ್ ಜಂಟಿ ವಿಜಯೋತ್ಸವ ಹಮ್ಮಿಕೊಂಡಿದ್ದವು. ಈ ಕಾರ್ಯಕ್ರಮದ ವೇದಿಕೆಯಲ್ಲಿ 20 ವರ್ಷಗಳ ಬಳಿಕ ಒಂದಾಗಿ ಕಾಣಿಸಿಕೊಂಡ ಉಭಯ ನಾಯಕರು, ಆಡಳಿತಾರೂಢ ಬಿಜೆಪಿ-ಶಿವಸೇನೆ- ಎನ್‌ಸಿಪಿ ಸರ್ಕಾರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಕಟು, ಮೊನಚಿನ ಪದಗಳ ಮೂಲಕ ವಾಕ್‌ಪ್ರಹಾರ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ‘ಜೊತೆಯಾಗಿರಲೆಂದೇ ನಾವು ಇಂದು ಒಂದಾಗಿದ್ದೇವೆ. ಮುಂದೆ ನಾವು ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಲಿದ್ದೇವೆ ಎಂದು ಘೋಷಿಸಿದರು. ಜೊತೆಗೆ, ಎಂಎನ್ಎಸ್ ಕಾರ್ಯಕರ್ತರ ಹಲ್ಲೆ ಪ್ರಕರಣ ಮುಂದಿಟ್ಟುಕೊಂಡು ಮರಾಠಿ ಹೆಸರಲ್ಲಿ ಗೂಂಡಾ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂಬ ಮುಖ್ಯಮಂತ್ರಿ ಫಡ್ನವೀಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ನ್ಯಾಯಾಕ್ಕಾಗಿ ಬೇಡಿಕೆ ಇಡುವ ಮರಾಠಿಗರನ್ನು ನೀವು ಗೂಂಡಾಗಳೆಂದು ಕರೆದಿದ್ದೀರಿ. ಹಾಗಿದ್ದರೆ ನಾವು ಗೂಂಡಾಗಳೇ ಎಂದು ತಿರುಗೇಟು ನೀಡಿದರು.
ಫಡ್ನವೀಸ್‌ಗೆ ಟಾಂಗ್:
ಉದ್ಧವ್ ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ‘ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮತ್ತು ಇತರರು ಮಾಡಲಾಗದ್ದನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಡಿದರು. 20 ವರ್ಷಗಳ ಬಳಿಕ ಸೋದರ ಸಂಬಂಧಿಗಳು ಒಂದಾಗಿದ್ದೇವೆ ಎಂದರು. ನಾವು ಒಟ್ಟಾಗಿದ್ದೇವೆ, ಒಟ್ಟಾಗಿಯೇ ಇರುತ್ತೇವೆ’ಎಂದು ಫಡ್ನವೀಸ್‌ಗೆ ಟಾಂಗ್ ನೀಡಿದರು. ಜೊತೆಗೆ, ತ್ರಿಭಾಷಾ ಸೂತ್ರ ಕುರಿತ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ ರಾಜ್ ಠಾಕ್ರೆ, ‘ನಿಮಗೆ ವಿಧಾನಭವನದಲ್ಲಿ ಅಧಿಕಾರ ಇರಬಹುದು. ಆದರೆ, ನಮಗೆ ಬೀದಿಯಲ್ಲಿ ಅಧಿಕಾರ ಇದೆ. ಈ ತ್ರಿಭಾಷಾ ಸೂತ್ರ ಕೇಂದ್ರದಿಂದ ತಂದು ಹೇರಿದ್ದು. ಮಹಾರಾಷ್ಟ್ರದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲೆಡೆ ಇಂಗ್ಲಿಷ್ ಬಳಕೆಯಿದೆ. ಇಂಥ ಸ್ಥಿತಿ ಇತರೆ ಯಾವುದೇ ರಾಜ್ಯಗಳಲ್ಲಿಲ್ಲ ಯಾಕೆ’ ಎಂದು ರಾಜ್ ಠಾಕ್ರೆ ಪ್ರಶ್ನಿಸಿದರು.
ಸೋದರರು:
ಉದ್ಧವ್ ಠಾಕ್ರೆ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುತ್ರ. ಬಾಳಾ ಠಾಕ್ರೆ ಅವರ ಸೋದರ ಶ್ರೀಕಾಂತ್ ಪುತ್ರ ರಾಜ್. 2005ರಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ರಾಜ್ ಠಾಕ್ರೆ ಶಿವಸೇನೆಯಿಂದ ಹೊರಹೋಗಿ ಎಂಎನ್‌ಎಸ್ ಎಂಬ ಪ್ರತ್ಯೇಕ ಪಕ್ಷ ಕಟ್ಟಿ ಶಿವಸೇನೆ ವಿರುದ್ಧ ಹೋರಾಟ ನಡೆಸಿದ್ದರು.
ಅಘಾಡಿಗೆ ಕೂಟಕ್ಕೆ ಸೋದರರ ಪೆಟ್ಟು?
ಶಿವಸೇನೆ, ಎಂಎನ್ಎಸ್ ವಿಜಯ ಯಾತ್ರೆಗೆ ಕೈ ಕಿಡಿಉದ್ಧವ್ ಹೊರಬಿದ್ರೆ ಶರದ್, ಕಾಂಗ್ರೆಸ್‌ಗೆ ಹೊಡೆತ
-ಮುಂಬೈ: 2 ದಶಕಗಳ ಬಳಿಕ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗಿರುವುದು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶರದ್ ಪವಾರ್ ಬಣದ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮೈತ್ರಿ ಕೂಟವಾಗಿದ್ದ ಮಹಾವಿಕಾಸ ಅಘಾಡಿಗೆ ಹೊಡೆತ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಶನಿವಾರದ ಸಭೆಯಲ್ಲಿ ಮುಂದಿನ ಪಾಲಿಕೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸುವ ಘೋಷಣೆಯನ್ನು ಉದ್ಧವ್ ಮಾಡಿದ್ದಾರೆ. ಇದು ಶರದ್ ಮತ್ತು ಕಾಂಗ್ರೆಸ್ ಪಾಲಿಗೆ ನೇರ ಸಂದೇಶ ಎನ್ನಲಾಗುತ್ತಿದೆ.
2024ರ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಅಘಾಡಿ ಮೈತ್ರಿಕೂಟದ ಮೂರೂ ಪಕ್ಷಗಳು ನಾನಾ ವಿಷಯದಲ್ಲಿ ಬಹಿರಂಗವಾಗಿಯೇ ವಿರುದ್ಧ ಹೇಳಿಕೆ ಮೂಲಕ ತಮ್ಮೊಳಗಿನ ಭಿನ್ನಾಭಿಪ್ರಾಯ ಬಹಿರಂಗಪಡಿಸಿವೆ. ಅದರ ಬೆನ್ನಲ್ಲೇ ಶನಿವಾರ ನಡೆದ ವಿಜಯೋತ್ಸವ ರ್‍ಯಾಲಿಯನ್ನು ಕೂಡಾ ಕಾಂಗ್ರೆಸ್ ಟೀಕಿಸಿದೆ. ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಸರ್ಕಾರ ನಿಲುವನ್ನು ಹಿಂತೆಗೆದುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೂ ಠಾಕ್ರೆ ಸಹೋದರರು ಅದರ ಹೆಗ್ಗಳಿಕೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಸಾಗುವ ಹೊಸ ದಿಕ್ಕು ಎನ್ನಲಾಗಿದೆ.
ಕುಟುಂಬದ ಪುನರ್ಮಿಲನ: ಬಿಜೆಪಿ ವ್ಯಂಗ್ಯ
ಪಂಡರಪುರ/( ಮುಂಬೈ): ಎರಡು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಕಾಣಿಸಿಕೊಂ ಡಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ‘ಕಳೆದುಕೊಂಡಿರುವ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಇದು ಹತಾಶ ಪ್ರಯತ್ನ. ಈ ಕಾರ್ಯಕ್ರಮ ಕುಟುಂಬದ ಪುನರ್ಮಿಲನದಂತಿದೆ’ ಎಂದು ವ್ಯಂಗ್ಯವಾಡಿದೆ.
‘ ವರ್ಲಿಯ ಕಾರ್ಯಕ್ರಮವು ರಾಜಕೀಯ ನೆಲೆ ಕಳೆದುಕೊಂಡಿರುವ ಶಿವ ಸೇನೆ(ಯುಬಿಟಿ) ಚೇತರಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ. ಇದು ಭಾಷಾ ಪ್ರೇಮಕ್ಕಾಗಿ ನಡೆದ ರ್‍ಯಾಲಿಯಾಗಿರಲಿಲ್ಲ. ಬದಲಾಗಿ ಮನೆಯಿಂದ ಹೊರಹಾಕಲ್ಪಟ್ಟ ಸಹೋದರ ಸಾರ್ವಜನಿಕವಾಗಿ ಓಲೈಸುವ ಪ್ರಯತ್ನವಾಗಿತ್ತು. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯ ಭಯದಿಂದಾಗಿ ತಮ್ಮ ಸಹೋದರತ್ವ ನೆನಪಿಸಿಕೊಂಡರು. ಈ ಕಾರ್ಯಕ್ರಮ ಕುಟುಂಬ ಪುನರ್ಮಿಲನದಂತಿದೆ’ ಎಂದು ಕಾಲೆಳೆದಿದ್ದಾರೆ.ಠಾಕ್ರೆ ಸಹೋದರರ ಒಗ್ಗೂಡುವುದಕ್ಕೆ ಫಡ್ನವೀಸ್ ಕಾರಣ ಎನ್ನುವ ಉದ್ಧವ್ ಠಾಕ್ರೆ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಟಾಂಗ್ ನೀಡಿದ್ದು, ‘ಬಾಳಾ ಸಾಹೇಬರ ಆಶೀರ್ವಾದ ನನ್ನ ಮೇಲಿದೆ. ಕಾರ್ಯಕ್ರಮ ಹಾಗೂ ಭಾಷಣ( ಉದ್ದವ್) ಬಗ್ಗೆ ಹೇಳಲು ಮರಾಠಿಯಲ್ಲಿ ಯಾವುದೇ ಪದಗಳಿಲ್ಲ. ಅದು ವಿಜಯ ಉತ್ಸವದ ರ್‍ಯಾಲಿಯಾಗಿರಲಿಲ್ಲ. ವೃತ್ತಿಪರ ಗೋಳಿಡುವವರ ದರ್ಶನದಂತಿತ್ತು’ ಎಂದಿದ್ದಾರೆ.