ಕ್ಷಮೆ ಕೇಳಿದ ರಾಮದೇವ್‌ಗೆ ಸುಪ್ರೀಂ ಮತ್ತೆ ತಪರಾಕಿ!

| Published : Apr 24 2024, 02:27 AM IST / Updated: Apr 24 2024, 06:12 AM IST

ಸಾರಾಂಶ

ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ತೆಗಳಿ ತಮ್ಮ ಉತ್ಪನ್ನಗಳನ್ನು ವೈಭವೀಕರಿಸಿದ ಆರೋಪ ಹೊತ್ತಿರುವ ಪತಂಜಲಿ ಆಯರ್ವೇದ ಲಿಮಿಟೆಡ್‌ನ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್‌ ಮತ್ತೆ ತಪರಾಕಿ ಹಾಕಿದೆ.

ನವದೆಹಲಿ: ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ತೆಗಳಿ ತಮ್ಮ ಉತ್ಪನ್ನಗಳನ್ನು ವೈಭವೀಕರಿಸಿದ ಆರೋಪ ಹೊತ್ತಿರುವ ಪತಂಜಲಿ ಆಯರ್ವೇದ ಲಿಮಿಟೆಡ್‌ನ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್‌ ಮತ್ತೆ ತಪರಾಕಿ ಹಾಕಿದೆ. ತನ್ನ ಆದೇಶದಂತೆ ಜಾಹೀರಾತು ನೀಡಿ ಬಹಿರಂಗ ಕ್ಷಮೆ ಕೇಳಿದ್ದಾಗಿ ಹೇಳಿದ ಸಂಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಪೀಠ, ಜಾಹೀರಾತು ನೀಡಿದ ಪ್ರಮಾಣದಲ್ಲಿಯೇ ಕ್ಷಮೆಯಾಚನೆಯನ್ನೂ ಪ್ರಕಟಿಸಿದ್ದೀರಾ ಎಂದು ಪ್ರಶ್ನಿಸಿದೆ.

ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪತಂಜಲಿ ಸಂಸ್ಥೆಯ ವಕೀಲರು, ನ್ಯಾಯಾಲಯದ ಸೂಚನೆಯಂತೆ 67 ದಿನಪತ್ರಿಕೆಗಳಲ್ಲಿ 10 ಲಕ್ಷ ರು. ಖರ್ಚು ಮಾಡಿ ಬಹಿರಂಗ ಕ್ಷಮೆ ಯಾಚಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಆದರೆ ಈ ‘ಕ್ಷಮೆಯಾಚನೆ ಶಾಸ್ತ್ರ’ದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾ। ಹಿಮಾ ಕೊಹ್ಲಿ ಹಾಗೂ ನ್ಯಾ। ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠ, ‘ಕೇವಲ ತೋರಿಕೆಗೆ ಜಾಹೀರಾತು ನೀಡಿದರೆ ಸಾಲದು. ನಿಮ್ಮ ಪತಂಜಲಿ ಜಾಹೀರಾತುಗಳನ್ನು ಪ್ರಕಟಿಸುವ ಗಾತ್ರದಲ್ಲೇ ಆ ಜಾಹೀರಾತುಗಳು ಇವೆಯೇ?’ ಎಂದು ಪ್ರಶ್ನಿಸಿತು.ಅಲ್ಲದೆ, ‘ನೀವು ಪ್ರಕಟಿಸಿರುವ ಎಲ್ಲ ಜಾಹೀರಾತುಗಳ ಪೇಪರ್‌ ಕಟಿಂಗ್‌ಗಳನ್ನು ಇದ್ದ ಗಾತ್ರದಲ್ಲೇ ಕೋರ್ಟ್‌ಗೆ ಇನ್ನು 2 ದಿನಗಳಲ್ಲಿ ಹಸ್ತಾಂತರಿಸಬೇಕು. ಅವು ಭೂತಗನ್ನಡಿ ಹಿಡಿದು ನೋಡುವಂತೆ ಇರಬಾರದು. ಅವುಗಳನ್ನು ಎನ್‌ಲಾರ್ಜ್‌ ಮಾಡಿ ನಮಗೆ ಕೊಡಕೂಡದು’ ಎಂದ ಪೀಠ ಏ.30ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿತು.

ಈ ವೇಳೆ ಬಾಬಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ‘ಈಗ 67 ಪತ್ರಿಕೆಗಳಲ್ಲಿ ಬಹಿರಂಗ ಕ್ಷಮೆ ಕೇಳಿದ್ದೇವೆ. ಇನ್ನಷ್ಟು ಪತ್ರಿಕೆಗಳಿಗೆ ನೀಡುತ್ತೇವೆ. ಇದಕ್ಕಾಗಿ ಈವರೆಗೆ 10 ಲಕ್ಷ ರು. ಖರ್ಚು ಮಾಡಿದ್ದೇವೆ’ ಎಂದರು. ಆಗ ನ್ಯಾಯಾಧೀಶರು ಸಿಡಿಮಿಡಿಗೊಂಡು, ‘ನೀವು ಎಷ್ಟು ಖರ್ಚು ಮಾಡಿದ್ದೀರೋ ನಮಗೆ ಬೇಕಿಲ್ಲ. ಪತಂಜಲಿ ಆಯುರ್ವೇದದ ಜಾಹೀರಾತಿನಷ್ಟೇ ದೊಡ್ಡದಾಗಿ ಕ್ಷಮಾಪಣೆ ಇದೆಯೇ ಎಂಬುದು ಮುಖ್ಯ. ಈ ಕೆಲಸವನ್ನು ನೀವು ಮೊದಲೇ ಮಾಡಬೇಕಿತ್ತು’ ಎಂದು ಚಾಟಿ ಬೀಸಿ ವಿಚಾರಣೆ ಮುಂದೂಡಿತು.ಪತಂಜಲಿ ಆಯುರ್ವೇದ ಸಂಸ್ಥೆಯು ಅಲೋಪತಿ ಚಿಕಿತ್ಸಾ ಪದ್ಧತಿಯನ್ನು ತೆಗಳಿ ಆಯುರ್ವೇದ ಹಾಗೂ ತನ್ನ ಉತ್ಪನ್ನಗಳನ್ನು ವೈಭವೀಕರಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದೆ.