ಉ. ಭಾರತದಲ್ಲಿ ಮುಂಗಾರು ಜೋರು: ಮಳೆಯ ಕೊರತೆ ಶೇ.11 ರಿಂದ 3ಕ್ಕೆ ಇಳಿಕೆ

| Published : Jul 05 2024, 12:52 AM IST / Updated: Jul 05 2024, 07:01 AM IST

ಉ. ಭಾರತದಲ್ಲಿ ಮುಂಗಾರು ಜೋರು: ಮಳೆಯ ಕೊರತೆ ಶೇ.11 ರಿಂದ 3ಕ್ಕೆ ಇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಭಾರತದಲ್ಲಿ ಅದರಲ್ಲೂ ವಾಯುವ್ಯ ಮತ್ತು ಈಶಾನ್ಯ ಭಾರತದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಯ ಪರಿಣಾಮ ಮುಂಗಾರು ಮಳೆಯ ಕೊರತೆ ಪ್ರಮಾಣ ಶೇ.11 ರಿಂದ ಶೇ.3 ಕ್ಕೆ ಇಳಿದಿದೆ.

ನವದೆಹಲಿ: ಉತ್ತರಭಾರತದಲ್ಲಿ ಅದರಲ್ಲೂ ವಾಯುವ್ಯ ಮತ್ತು ಈಶಾನ್ಯ ಭಾರತದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಯ ಪರಿಣಾಮ ಮುಂಗಾರು ಮಳೆಯ ಕೊರತೆ ಪ್ರಮಾಣ ಶೇ.11 ರಿಂದ ಶೇ.3 ಕ್ಕೆ ಇಳಿದಿದೆ. 

ಜೂನ್‌ ತಿಂಗಳಲ್ಲಿ ಭಾರತದಲ್ಲಿ ಒಟ್ಟಾರೆಯಾಗಿ 142.2 ಮಿಮೀ ಮಳೆಯಾಗಿದ್ದು, ಶೇ. 11 ರಷ್ಟು ಮಳೆ ಕೊರತೆ ಎದುರಾಗಿತ್ತು. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜೂ.30ಕ್ಕೆ ವಾಯುವ್ಯ ಭಾರತದಲ್ಲಿ ಶೇ. 33 ಮಳೆ ಕೊರತೆ ಎದುರಾಗಿತ್ತು. 

ಅದು ಈಗ ಶೇ. 14 ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಮಧ್ಯ ಭಾರತದಲ್ಲಿ ಶೇ.14 ರಿಂದ ಶೇ. 8ಕ್ಕೆ ಹಾಗೂ ಪೂರ್ವದಲ್ಲಿ ಶೇ.13 ರಿಂದ ಶೇ.2 ಕ್ಕೆ ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ ಇದುವರೆಗೆ ಮುಂಗಾರು ಮಳೆ ಶೇ.13 ಹೆಚ್ಚುವರಿ ಮಳೆಯಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಬಲಿಯಾದ ಪ್ಯಾಲೇಸ್ಟೀನರ ಸಂಖ್ಯೆ 38 ಸಾವಿರಕ್ಕೆ ಏರಿಕೆ

ದೇರ್ ಅಲ್-ಬಲಾಹ್: 9 ತಿಂಗಳು ತುಂಬಿದ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧದಲ್ಲಿ ಪ್ಯಾಲೇಸ್ತೀನಿಯರ ಸಾವಿನ ಸಂಖ್ಯೆ 38 ಸಾವಿರಕ್ಕೆ ದಾಟಿದೆ ಎಂದು ಗಾಜಾ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ. ಕಳೆದ 24 ಗಂಟೆಯಲ್ಲಿ 58 ಜನರ ಮೃತದೇಹಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದು, ಒಟ್ಟಾರೆ ಸಾವಿನ ಸಂಖ್ಯೆ 38,011 ಕ್ಕೆ ತಲುಪಿದೆ. ಸತ್ತವರ ಸಂಖ್ಯೆಯಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಈ ಯುದ್ಧದಲ್ಲಿ 87 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಇಸ್ರೇಲ್ ಮತ್ತು ಹಮಾಸ್‌ ನಡುವೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಯುದ್ಧ ಆರಂಭವಾಗಿತ್ತು.

ಕೋಟಾ; ಮತ್ತೊಬ್ಬ ಜೆಇಇ ವಿದ್ಯಾರ್ಥಿ ನೇಣಿಗೆ ಶರಣು: ಈ ವರ್ಷದ 13ನೇ ಕೇಸ್‌

ಕೋಟಾ: ನೀಟ್‌, ಜೆಇಇ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. 16 ವರ್ಷದ ಸಂದೀಪ್‌ ಕುಮಾರ್‌ ಕುರ್ಮಿ, ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಇದು ವರ್ಷದ 13ನೇ ಆತ್ಮಹತ್ಯೆ ಪ್ರಕರಣವಾಗಿದೆ. ಬುಧವಾರ ರಾತ್ರಿ ಸಂದೀಪ್‌ ಪಿಜಿ ಕೋಣೆ ಬಾಗಿಲು ತೆರೆಯದನ್ನು ಕಂಡ ಸ್ನೇಹಿತರು ವಾರ್ಡನ್‌ ಗಮನಕ್ಕೆ ತಂದು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಸಂದೀಪ್‌ ಶವವನ್ನು ಹೊರತೆಗೆದಿದ್ದಾರೆ.ಸಂದೀಪ್‌ ಹಾಗೂ ಆತನ ಸೋದರ ಇಬ್ಬರೂ ಕೋಟಾದಲ್ಲಿ ಪ್ರತ್ಯೇಕ ಪಿಜಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಪೋಷಕರು ಇಲ್ಲದ ಕಾರಣ ಇವರ ಸಂಬಂಧಿ ಹಣಕಾಸಿನ ನೆರವು ನೀಡುತ್ತಿದ್ದರು.ಕಳೆದ ವರ್ಷ 26 ವಿದ್ಯಾರ್ಥಿಗಳು ಅಸುನೀಗಿದ್ದರು. ಸಂದೀಪ್‌ ವಾಸಿಸುತ್ತಿದ್ದ ಪಿಜಿಯಲ್ಲಿ ಆತ್ಮಹತ್ಯೆ ತಡೆಯುವ ಸ್ಪ್ರಿಂಗ್‌ ಫ್ಯಾನ್‌ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

==

ಡ್ರಗ್ಸ್‌ ಸೇವನೆ ಮಾಡುತ್ತಿದ್ದ ಮಗನನ್ನೇ ಪೊಲೀಸರಿಗೆ ಹಿಡಿದು ಕೊಟ್ಟ ತಾಯಿ!

ಚೆನ್ನೈ: ಗಾಂಜಾ ಸೇವನೆ ಮಾಡುತ್ತಿದ್ದ ಮಗನನ್ನು ತಾಯಿಯೇ ಪೊಲೀಸರ ಕೈಗೆ ಒಪ್ಪಿಸಿದ ಅಚ್ಚರಿಯ ಘಟನೆ ಚೆನ್ನೈನಲ್ಲಿ ನಡೆದಿದೆ. ಸರಕು ವಾಹನದ ಚಾಲಕನಾದ ಶ್ರೀರಾಮ್‌ ಇತ್ತೀಚಿಗೆ ಗಾಂಜಾ ಸೇವನೆ ಅಭ್ಯಾಸ ಬೆಳೆಸಿಕೊಂಡಿದ್ದ. ಈ ವಿಚಾರ ಗಮನಿಸಿದ ತಾಯಿ ಭಾಗ್ಯಲಕ್ಷ್ಮೀ ತಾವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಶ್ರೀರಾಮ್ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆಯಲ್ಲಿ ಪೊಲೀಸರು 2 ಲಕ್ಷ ರು ಮೌಲ್ಯದ 630 ಮಿಲೀ ಗಾಂಜಾ ಎಣ್ಣೆ ವಶ ಪಡಿಸಿಕೊಂಡಿದ್ದಾರೆ. ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಒಡಿಶಾ, ತಮಿಳುನಾಡು, ಕೇರಳದಲ್ಲಿ ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ್ದಾರೆ.