ಸಾರಾಂಶ
ನವದೆಹಲಿ: ಬುಧವಾರವಷ್ಟೇ ಐತಿಹಾಸಿಕ 80000 ಅಂಕಗಳನ್ನು ಮುಟ್ಟಿಬಂದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ 1 ಲಕ್ಷದ ಗಡಿಯನ್ನು ಮುಟ್ಟಲಿದೆಯೇ? ಇಂಥದ್ದೊಂದು ಕುತೂಹಲ, ಚರ್ಚೆ ಇದೀಗ ಎಲ್ಲರಲ್ಲಿ ನಡೆದಿದೆ.
ಸೆನ್ಸೆಕ್ಸ್ ಕಳೆದ 45 ವರ್ಷಗಳಲ್ಲಿ ಶೇ.15.9ರಷ್ಟು ಸಮಗ್ರ ವಾರ್ಷಿಕ ಅಭಿವೃದ್ಧಿ ಪ್ರಮಾಣ ಹೊಂದಿದೆ. 1986ರಲ್ಲಿ ಆರಂಭಗೊಂಡ ಸೆನ್ಸೆಕ್ಸ್‌ನ ಮೂಲ ಮೌಲ್ಯವನ್ನು ಅದು 1979ರ ಏ.3ರಲ್ಲಿ ಇದ್ದ 100ಕ್ಕೆಹೊಂದಾಣಿಕೆ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಅದು 800 ಪಟ್ಟು ಬೆಳವಣಿಗೆ ಕಂಡುಬಂದಿದೆ. ಹೀಗಾಗಿ ಕಳೆದ 45 ವರ್ಷಗಳಲ್ಲಿ ದಾಖಲಿಸಿದ ಶೇ.15.99ರಷ್ಟು ಬೆಳವಣಿಗೆ ಗತಿಯನ್ನೇ ಮುಂದುವರೆಸಿದರೆ 2025ರ ಡಿಸೆಂಬರ್ ವೇಳೆಗೆ ಸೆನ್ಸೆಕ್ಸ್ 1 ಲಕ್ಷ ಅಂಕ ತಲುಪುವ ಎಲ್ಲಾ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.
1996ರ ಬಳಿಕ ಕೇವಲ 6 ವರ್ಷ ಮಾತ್ರವೇ ಸೆನ್ಸೆಕ್ಸ್ ಋಣಾತ್ಮಕ ಫಲಿತಾಂಶ ನೀಡಿದೆ. ಕಳೆದ 5 ವರ್ಷಗಳಲ್ಲಿ ಸೂಚ್ಯಂಕ 40000 ಅಂಕಗಳ ಭಾರೀ ಏರಿಕೆ ಕಾಣುವ ಮೂಲಕ ಡಬಲ್ ಆಗಿದೆ.
ಇನ್ನು ಸೆನ್ಸೆಕ್ಸ್ ಪ್ರತಿ 5 ವರ್ಷಕ್ಕೆ ದ್ವಿಗುಣ ಆಗುತ್ತಾ ಇರುವ ಲೆಕ್ಕಾಚಾರ ಪರಿಗಣಿಸಿದರೆ 2029ರ ವೇಳೆಗೆ ಸೂಚ್ಯಂಕ ಮತ್ತೊಂದು ಸಾರ್ವಕಾಲಿಕ ಮಟ್ಟವಾದ 1.50 ಲಕ್ಷ ಅಂಕಗಳನ್ನು ಮುಟ್ಟಲಿದೆ ಎಂದು ತಜ್ಞರು ಹೇಳಿದ್ದಾರೆ.