ಹೇಮಂತ್‌ ಮತ್ತೆ ಜಾರ್ಖಂಡ್‌ ಸಿಎಂ

| Published : Jul 04 2024, 01:01 AM IST / Updated: Jul 04 2024, 04:57 AM IST

hemanth soren

ಸಾರಾಂಶ

ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹೇಮಂತ್‌ ಸೊರೇನ್‌ ಅವರು ಮತ್ತೆ 5 ತಿಂಗಳ ಬಳಿಕ ಜಾರ್ಖಂಡ್‌ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ.

ರಾಂಚಿ: ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹೇಮಂತ್‌ ಸೊರೇನ್‌ ಅವರು ಮತ್ತೆ 5 ತಿಂಗಳ ಬಳಿಕ ಜಾರ್ಖಂಡ್‌ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ. ಬುಧವಾರ ನಡೆದ ಅಚ್ಚರಿಯ ವಿದ್ಯಮಾನದಲ್ಲಿ ಹಾಲಿ ಮುಖ್ಯಮಂತ್ರಿ ಚಂಪೈ ಸೊರೇನ್‌ ರಾಜೀನಾಮೆ ನೀಡಿದ್ದು, ಹೇಮಂತ್‌ ಅವರು ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಜೆಎಂಎಂ-ಕಾಂಗ್ರೆಸ್‌ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಹಾಲಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರನ್ನು ಕೆಳಗಿಳಿಸಿ ಮರಳಿ ಹೇಮಂತ್‌ ಅವರನ್ನು ಸಿಎಂ ಮಾಡಲು ನಿರ್ಧರಿಸಲಾಯಿತು. ಅಲ್ಲದೆ, ಹೇಮಂತ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ನಿರ್ಣಯವನ್ನೂ ಸ್ವೀಕರಿಸಲಾಯಿತು.

ಇದಾದ ಕೆಲವೇ ಹೊತ್ತಿನಲ್ಲಿ ಚಂಪೈ ಹಾಗೂ ಹೇಮಂತ್ ಒಟ್ಟಿಗೇ ರಾಜಭವನಕ್ಕೆ ತೆರಳಿದರು. ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ ಅವರಿಗೆ ಚಂಪೈ ರಾಜೀನಾಮೆ ಸಲ್ಲಿಸಿದರು. ಮರುಕ್ಷಣವೇ ಹೇಮಂತ್‌ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿ, ತಮಗೆ ಬಹುಮತ ಇದೆ ಎಂದು ಸೂಚಿಸುವ ಶಾಸಕರ ಬೆಂಬಲ ಪತ್ರ ನೀಡಿದರು. ರಾಜ್ಯಪಾಲರು ಆಹ್ವಾನ ನೀಡಿದ ನಂತರ ಹೇಮಂತ್‌ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಭೂಅಕ್ರಮ ಪ್ರಕರಣದಲ್ಲಿ ಬಂಧನ ಖಚಿತವಾಗುತ್ತಲೇ ಕಳೆದ ಜ.31ರಂದು ಹೇಮಂತ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದಲ್ಲಿ ಜೂ.28ರಂದು ಜಾಮೀನು ಸಿಕ್ಕ ಅಂದೇ ಬಿಡುಗಡೆಯಾಗಿದ್ದರು. ಈ ನಡುವೆ ಜೆಎಂಎಂ ನಾಯಕ ಚಂಪೈ ಸೊರೇನ್‌ ಫೆ.2ರಂದು ಸಿಎಂ ಆಗಿ ಪ್ರಮಾಣವಚ ಸ್ವೀಕರಿಸಿದ್ದರು.

ಬಿಜೆಪಿ ಟೀಕೆ:

ಈ ನಡುವೆ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ, ಸಂಸದ ನಿಶಿಕಾಂತ್‌ ದುಬೆ, ‘ರಾಜ್ಯದಲ್ಲಿ ಚಂಪೈ ಸೊರೇನ್‌ ಯುಗ ಮುಗಿಯಿತು. ಕುಟುಂಬ ಆಧರಿತ ಪಕ್ಷದಲ್ಲಿ, ಕುಟುಂಬದ ಹೊರಗಿನವರಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಹೇಮಂತ್‌ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಇ.ಡಿ.:

ನವದೆಹಲಿ: ಅತ್ತ ಹೇಮಂತ ಸೊರೇನ್‌ ಮತ್ತೆ ಜಾರ್ಖಂಡ್ ಮುಖ್ಯಮಂತ್ರಿ ಆಗಲು ವೇದಿಕೆ ಸಿದ್ಧವಾದ ಬೆನ್ನಲ್ಲೇ, ಅವರಿಗೆ ದಿಲ್ಲಿ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಒಂದು ವೇಳೆ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದರೆ ಹೇಮಂತ್‌ ಗೊಂದಲಕ್ಕೆ ಒಳಗಾಗುವುದು ನಿಶ್ಚಿತ.