ಸಾರಾಂಶ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾದ ಹೇಮಂತ್ ಸೊರೇನ್ ಮೂರನೇ ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾದ ಹೇಮಂತ್ ಸೊರೇನ್ ಮೂರನೇ ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಹೇಮಂತ್‌ಗೆ ಪ್ರಮಾಣ ವಚನ ಬೋಧಿಸಿದರು.ಪ್ರಮಾಣವಚನ ವೇಳೆ ಜೆಎಂಎಂ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ಹೇಮಂತ್ ಪತ್ನಿ ಶಾಸಕಿ ಕಲ್ಪನಾ ಸೊರೇನ್, ನಿಕಟಪೂರ್ವ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಉಪಸ್ಥಿತರಿದ್ದರು.
ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಖಚಿತವಾದ ಬೆನ್ನಲ್ಲೇ ಕಳೆದ ಜ.28ರಂದು ಹೇಮಂತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಂಪೈ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಈ ನಡುವೆ ಜೂ.28ರಂದು ಕೋರ್ಟ್ ಹೇಮಂತ್‌ಗೆ ಜಾಮೀನು ನೀಡಿದ ಬೆನ್ನಲ್ಲೇ ಚಂಪೈ ಅವರಿಂದ ರಾಜೀನಾಮೆ ಪಡೆದ ಜೆಎಂಎಂ ನಾಯಕರು ಮರಳಿ ಹೇಮಂತ್ ಅವರನ್ನು ಸಿಎಂ ಆಗಿ ನೇಮಿಸಿದ್ದಾರೆ.
ಬಿಜೆಪಿ ಕಿಡಿ:
ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗಿರುವುದನ್ನು ಟೀಕಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಜಾರ್ಖಂಡ್‌ನಲ್ಲಿ ಚಂಪೈ ಸೊರೇನ್ ಅಧಿಕಾರ ಕೊನೆಗೂ ಅಂತ್ಯವಾಗಿದೆ. ಜೆಎಂಎಂನಲ್ಲಿ ಕೇವಲ ಕುಟುಂಬಕ್ಕೆ ಮಾತ್ರ ಮಣೆ ಹಾಕಲಾಗುತ್ತದೆ. ಹೊರಗಿನ ಬುಡಕಟ್ಟು ನಾಯಕರು ಕೇವಲ ಹೆಸರಿಗೆ ಮಾತ್ರ. ಅಧಿಕಾರವೆಲ್ಲಾ ಶಿಬು ಸೊರೇನ್ ಕುಟುಂಬದಲ್ಲಿಯೇ ಇರುತ್ತದೆ.