ಸಾರಾಂಶ
ಜೈಪುರ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಾವು ಉಸ್ತುವಾರಿಯಾಗಿದ್ದ ಕ್ಷೇತ್ರಗಳಲ್ಲಿ 7ರ ಪೈಕಿ 4 ಕ್ಷೇತ್ರಗಳಲ್ಲಿ ಬಿಜೆಪಿ ಸೋತ ಹಿನ್ನೆಲೆಯಲ್ಲಿ, ರಾಜಸ್ಥಾನದ ಬಿಜೆಪಿ ಸರ್ಕಾರದ ಹಿರಿಯ ಸಚಿವ ಕಿರೋಡಿ ಲಾಲ್ ಮೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಈ ನಿರ್ಧಾರ ಪ್ರಕಟಿಸಿದ ಕಿರೋಡಿ, ‘ಚುನಾವಣೆ ಸಂದರ್ಭದಲ್ಲಿ ಪೂರ್ವ ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ 7 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ನೀಡಿದ್ದರು. ಅದರಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಬಿಜೆಪಿ ಸೋತರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಅದರಂತೆ ರಾಜೀನಾಮೆ ನೀಡಿದ್ದೇನೆ’. ಇದು ನನ್ನ ಸ್ವಯಂ ನಿರ್ಧಾರವಾಗಿದೆ’ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ರಾಜ್ಯದ ಎಲ್ಲಾ 25 ಸ್ಥಾನಗಳಲ್ಲೂ ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ 25ರ ಪೈಕಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 8 ಸ್ಥಾನ ಗೆದ್ದಿತ್ತು. ಈ ಪೈಕಿ 4 ಕ್ಷೇತ್ರಗಳು ಮೀನಾ ಅವರಿಗೆ ವಹಿಸಿದ 7 ಕ್ಷೇತ್ರಗಳ ವ್ಯಾಪ್ತಿಯದ್ದು.