ಸಾರಾಂಶ
ತೆಹರಾನ್: ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಭಯಾನಕ ದಾಳಿಗೆ ಬೆದರಿ ಹಿಜ್ಬುಲ್ಲಾದ ಉಪ ಪ್ರಧಾನ ಕಾರ್ಯದರ್ಶಿ ನೈಮ್ ಖಾಸಿಮ್ ಇರಾನ್ ರಾಜಧಾನಿ ತೆಹರಾನ್‌ಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಹಿಜ್ಬುಲ್ಲಾ ಮುಖ್ಯಸ್ಥನಾಗಿದ್ದ ಹಸನ್ ನಸ್ರಲ್ಲಾ ಸೇರಿದಂತೆ ಅನೇಕ ನಾಯಕರನ್ನು ಇಸ್ರೇಲ್ ಸೇನೆ ಬಲಿಪಡೆದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
‘ಸುರಕ್ಷತೆಯ ದೃಷ್ಟಿಯಿಂದ ಒಂದು ವಾರದ ಮೊದಲೇ ಖಾಸಿಮ್‌ನನ್ನು ಲೆಬನಾನ್‌ನಿಂದ ಇರಾನ್‌ಗೆ ಕರೆದೊಯ್ಯಲಾಗಿತ್ತು. ಇದಕ್ಕಾಗಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಪ್ರಯಾಣಿಸುವ ವಿಮಾನವನ್ನು ಬಳಸಲಾಗಿತ್ತು’ ಎಂದು ಯುಎಇ ಮೂಲದ ಸುದ್ದಿಸಂಸ್ಥೆ ಎರೆಂ ನ್ಯೂಸ್ ವರದಿ ಮಾಡಿದೆ.
ಇದಕ್ಕೆ ಪುಷ್ಟಿ ಕೊಡುವಂತೆ ನಸ್ರಲ್ಲಾ ಸಾವಿನ ಬಳಿಕ ಖಾಸಿಮ್ ಮಾಡಿದ 3ನೇ ಭಾಷಣವನ್ನು ತೆಹರಾನ್‌ನಲ್ಲಿ ರೆಕಾರ್ಡ್ ಮಾಡಲಾಗಿತ್ತು.
ಪಾಕ್‌ನಲ್ಲಿ 64 ವರ್ಷ ಬಳಿಕ ದೇಗುಲ ಜೀರ್ಣೋದ್ದಾರ
ಲಾಹೋರ್: ಇಲ್ಲಿನ ಪಂಜಾಬ್ ಪ್ರಾಂತ್ಯದ 64 ವರ್ಷದ ಹಳೆಯದಾದ ಹಿಂದೂ ದೇಗುಲವೊಂದರ ಮೊದಲ ಹಂತದ ಜೀರ್ಣೋದ್ದಾರಕ್ಕೆ ಪಾಕಿಸ್ತಾನದ ಬಜೆಟ್‌ನಲ್ಲಿ1 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲ್ವಿಚಾರಣೆ ನಡೆಸುವ ಇವ್ಯಾಕ್ಯೂ ಟ್ರಸ್ಟ್ ಆಸ್ತಿ ಮಂಡಳಿ (ಇಟಿಪಿಬಿ) 1960ರಲ್ಲಿ ನಾರೊವಾಲ್ ಪಟ್ಟಣದ ಜಫ್ವಾಲ್‌ನಲ್ಲಿ ಹಾನಿಗೊಂಡಿದ್ದ ಬಾವೊಲಿ ಸಾಹಿಬ್ ದೇಗುಲ ಪುನರ್ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ರಾವಿ ನದಿಗೆ ಹತ್ತಿರದಲ್ಲಿದೆ ಎಂದು ಡಾನ್ ವರದಿ ಮಾಡಿದೆ. ಪಾಕಿಸ್ತಾನ ರಚನೆಯಾದ ಬಳಿಕ ನಾರೊವಾಲ್ ಜಿಲ್ಲೆಯಲ್ಲಿ 45 ದೇವಾಲಯಗಳಿದ್ದವು. ಕಾಲನಂತರ ಅವು ಕುಸಿದು ಬಿದ್ದಿದ್ದವು.
ಸಿಜೆಐ ಬಗ್ಗೆ ಎಸ್ಪಿ ನಾಯಕ ರಾಮಗೋಪಾಲ ಯಾದವ್ ಆಕ್ಷೇಪಾರ್ಹ ನುಡಿ
ಲಖನೌ: ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ಬಗ್ಗೆ ಎಸ್ಪಿ ನಾಯಕ ರಾಮಗೋಪಾಲ್ ಯಾದವ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
‘ರಾಮಜನ್ಮಭೂಮಿ ವಿವಾದ ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೆ’ ಎಂದು ನ್ಯಾ। ಚಂದ್ರಚೂಡ ಭಾನುವಾರ ಹೇಳಿದ್ದರು. ಈ ಬಗ್ಗೆ ಸೋಮವಾರ ಪತ್ರಕರ್ತರು ಯಾದವ್‌ರನ್ನು ಪ್ರಶ್ನಿಸಿದಾಗ, ‘ಸತ್ತವರನ್ನು ಬದುಕಿಸಿದಾಗ ದೆವ್ವ ಅಗುತ್ತಾರೆ. ಮನಬಂದಂತೆ ಮೂರ್ಖನ ರೀತಿ ಮಾತನಾಡುತ್ತಾರೆ. ಅಂಥವರಿಗೆಲ್ಲ ನಾನು ಕೇರ್ ಮಾಡಲ್ಲ’ ಎಂದರು.ಆದರೆ ಇದು ವಿವಾದ ಸೃಷ್ಟಿಸುತ್ತಿದ್ದಂತೆಯೇ, ‘ನಾನು ಹೇಳಿದ್ದು ಚಂದ್ರಚೂಡ್ ಬಗ್ಗೆ ಅಲ್ಲ. ಬಹ್ರೈಚ್ ಕೋಮುಗಲಭೆಗೆ ಕಾರಣರಾದವರ ಬಗ್ಗೆ. ಪತ್ರಕರ್ತರು ನನ್ನನ್ನು ಚಂದ್ರಚೂಡ್ ಬಗ್ಗೆ ಪ್ರಶ್ನೆ ಕೇಳೇ ಇರಲಿಲ್ಲ’ ಎಂದು ಉಲ್ಟಾ ಹೊಡೆದಿದ್ದಾರೆ.
ಈ ನಡುವೆ, ‘ಯಾದವ್ ಹೇಳಿಕೆ ಅಕ್ಷಮ್ಯ. ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸು ಹಾಕಬೇಕು’ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಆಗ್ರಹಿಸಿದ್ದಾರೆ.
ಬಿಹಾರ ಚುನಾವಣೆಗೂ ಮುನ್ನ 78 ಸಾವಿರ ಪೊಲೀಸ್ ಹುದ್ದೆ ಭರ್ತಿ ಮಾಡಿ: ಡಿಜಿಪಿ ಕೈ ಮುಗಿದ ಸಿಎಂ
ಪಟನಾ: ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ 6 ತಿಂಗಳೊಳಗೆ ಸುಮಾರು 78 ಸಾವಿರ ಪೊಲೀಸ್ ಹುದ್ದೆಗಳಿಗೆ ನೇಮಕಾತಿ ನಡೆಸಿ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್, ಡಿಜಿಪಿ ಅಲೋಕ್ ರಾಜ್‌ಗೆ ಕೈ ಮುಗಿದು ಕೇಳಿಕೊಂಡ ಘಟನೆ ನಡೆದಿದೆ.ಬಿಹಾರದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಿತೀಶ್ ಕುಮಾರ್ ಡಿಜಿಪಿ ಕಡೆಗೆ ತಿರುಗಿ ಕೈ ಮುಗಿದು ‘ ಮುಂದಿನ 6 ತಿಂಗಳಿನಲ್ಲಿ 78 ಸಾವಿರ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಿ. ಮುಂದಿನ ವರ್ಷ ವಿಧಾನಸಭೆ ಚುನಾವಣೆಯಿದೆ. ಅದಕ್ಕೂ ಮುನ್ನ ನೇಮಕಾತಿ ಪೂರ್ತಿಗೊಳಿಸಿ. ಸದ್ಯ ಬಿಹಾರದಲ್ಲಿ 1.10 ಲಕ್ಷ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಅದನ್ನು 2.29 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದಿದ್ದಾರೆ.ಕಳೆದ ಜುಲೈನಲ್ಲಿ ನಿತೀಶ್ ಕುಮಾರ್ ಖಾಸಗಿ ಕಂಪನಿಯ ಅಧಿಕಾರಿಯೊಬ್ಬರಿಗೆ ಇದೇ ರೀತಿ ಕಾರ್ಯಕ್ರಮವೊಂದರಲ್ಲಿ, ರಸ್ತೆ ಕಾಮಗಾರಿ ನಡೆಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬಳಿ ‘ಕಾಲು ಹಿಡಿತೀನಿ ಆದಷ್ಟು ಬೇಗ ಕೆಲಸ ಮಾಡಿ’ ಎಂದಿದ್ದರು.