ಸಾರಾಂಶ
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, 300 ಕ್ಕೂ ಹೆಚ್ಚು ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕೃಷ್ಣಾ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ 300ಕ್ಕೂ ಹೆಚ್ಚು ವಿಡಿಯೋಗಳನ್ನು ಸೆರೆಹಿಡಿಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗೆ ಸೆರೆ ಹಿಡಿದ ವಿಡಿಯೋಗಳನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಅದರ ಬೆನ್ನಲ್ಲೇ ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಕುರಿತು ತನಿಖೆಗೆ ಆದೇಶಿಸಿದ್ದು, ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯ ಭರವಸೆ ನೀಡಿದ್ದಾರೆ. ಈ ನಡುವೆ ಪ್ರಕರಣವನ್ನು ಮುಚ್ಚಿಹಾಕಲು ಕಾಲೇಜಿನ ಆಡಳಿತ ಮಂಡಳಿ ಯತ್ನಿಸುತ್ತಿದೆ. ಘಟನೆ ಕುರಿತು ದೂರು ನೀಡದಂತೆ ನಮಗೂ ಬೆದರಿಕೆ ಹಾಕಿದೆ ಸಿಎಂ ಸೂಚನೆ ಅನ್ವಯ ಕಾಲೇಜಿಗೆ ಭೇಟಿ ನೀಡಿದ್ದ ಸಚಿವ ರಾಜೇಂದ್ರಕ್ಕೆ ವಿದ್ಯಾರ್ಥಿನಿಯರು ದೂರಿದ್ದಾರೆ. ಅಲ್ಲದೆ ನ್ಯಾಯ ಸಿಗುವವವರೆಗೂ ತರಗತಿಗೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಏನಿದು ಪ್ರಕರಣ?:
ಕೃಷ್ಣಾ ಜಿಲ್ಲೆಯ ಗುಡ್ಲವೆಲ್ಲೇರು ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನ ಕೆಲ ವಿದ್ಯಾರ್ಥಿನಿಯರಿಗೆ ತಮ್ಮ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿದ್ದು ಕಂಡುಬಂದಿದೆ. ಅಲ್ಲಿ ಸೆರೆಹಿಡಿದ 300ಕ್ಕೂ ಹೆಚ್ಚು ವಿಡಿಯೋಗಳನ್ನು ಬಾಯ್ಸ್ ಹಾಸ್ಟೆಲ್‌ನಲ್ಲಿ ಹಣಕ್ಕಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಿದ್ಯಾರ್ಥಿನಿಯರು ಗುಂಪುಗೂಡಿ ಪ್ರತಿಭಟನೆ ಆರಂಭಿಸಿ ನ್ಯಾಯಕ್ಕಾಗಿ ಒತ್ತಾಯ ಮಾಡಿದ್ದಾರೆ.
ಈ ಆರೋಪದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮೀಪದಲ್ಲೇ ಇರುವ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ದಾಳಿ ಮಾಡಿ, ಕ್ಯಾಮೆರಾ ಅಳವಡಿಸಿದ್ದ ಎಂದು ಆರೋಪಿಸಲಾದ ಅಂತಿಮ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೆಲ ವಿದ್ಯಾರ್ಥಿಗಳ ಮೊಬೈಲ್, ಲ್ಯಾಪ್‌ಟಾಪ್ ಪರಿಶೀಲಿಸಿದಾಗ ಅದರಲ್ಲಿ ಸೋರಿಕೆ ಆಗಿದೆ ಎನ್ನಲಾದ ವಿಡಿಯೋಗಳ ಕುರಿತು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಇನ್ನೊಂದೆಡೆ ಕಾಲೇಜು ಆಡಳಿತ ಮಂಡಳಿ ಕೂಡಾ ಯಾವುದೇ ರಹಸ್ಯ ಕ್ಯಾಮೆರಾ ಪತ್ತೆಯಾಗಿಲ್ಲ ಎಂದು ಹೇಳಿದೆ. ಹೀಗಾಗಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.