ಆಧಾರ್‌ ಸೇವೆಗಳ ಶುಲ್ಕ ಹೆಚ್ಚಳ : ಯುಐಡಿಎಐ

| N/A | Published : Oct 03 2025, 01:07 AM IST

ಸಾರಾಂಶ

ಹೆಸರು ಬದಲಾವಣೆ, ಬೆರಳಚ್ಚು ನವೀಕರಣ ಮೊದಲಾದ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. 

ನವದೆಹಲಿ: ಹೆಸರು ಬದಲಾವಣೆ, ಬೆರಳಚ್ಚು ನವೀಕರಣ ಮೊದಲಾದ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಹೊಸ ದರಗಳು ಅ.1ರಿಂದಲೇ ಜಾರಿಗೆ ಬಂದಿವೆ. ಕಳೆದ 5 ವರ್ಷಗಳಲ್ಲಿ ಆಧಾರ್ ನವೀಕರಣ ಶುಲ್ಕದಲ್ಲಿ ಇದೇ ಮೊದಲ ಬಾರಿಗೆ ಏರಿಕೆಯಾಗಿದೆ.

ಪ್ರಮುಖ ಬದಲಾವಣೆಗಳು:

ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕದಂತಹ ವಿವರಗಳನ್ನು ಬದಲಾಯಿಸಲು ಶುಲ್ಕ 50 ರು.ನಿಂದ 75 ರು.ಗೆ ಏರಿಕೆಯಾಗಿದೆ. ಬೆರಳಚ್ಚು, ಕಣ್ಣಿನ ಸ್ಕ್ಯಾನ್‌, ಫೋಟೋದಂತಹ ಬಯೋಮೆಟ್ರಿಕ್‌ ವಿವರಗಳನ್ನು ಬದಲಾಯಿಸುವ ಶುಲ್ಕ 100 ರು.ನಿಂದ 125ಕ್ಕೆ ಏರಿಕೆಯಾಗಿದೆ. 5-7 ವರ್ಷದ ಮಕ್ಕಳು ಮತ್ತು 15-17 ವರ್ಷದ ಹದಿಹರೆಯದವರಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣಕ್ಕೆ ಈಗ ಶುಲ್ಕ ಇಲ್ಲ. ಈ ಹಿಂದೆ ಇದಕ್ಕೆ ₹50 ಶುಲ್ಕವಿತ್ತು.

ಯಾವುದರಲ್ಲಿ ಬದಲಾವಣೆಯಿಲ್ಲ?:

ಹೊಸ ಆಧಾರ್ ಕಾರ್ಡ್ ಪಡೆಯುವುದು ಇನ್ನುಮುಂದೆಯೂ ಉಚಿತವಾಗಿದೆ, ಯಾವುದೇ ಶುಲ್ಕ ಇಲ್ಲ. ಆಧಾರ್ ಕೇಂದ್ರಕ್ಕೆ ಭೇಟಿ ನೀಡಲಾಗದವರಿಗೆ, ಯುಐಡಿಎಐ ಮನೆಯಲ್ಲೇ ನವೀಕರಣ ಸೇವೆಯನ್ನು ಒದಗಿಸುತ್ತದೆ. ಇದಕ್ಕೆ ಮೊಬೈಲ್ ಆಧಾರ್ ಆ್ಯಪ್‌ ಅನ್ನು ಬಳಸಲಾಗುತ್ತದೆ. ಈ ಸೇವೆಯ ಶುಲ್ಕ 700 ರು. ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಸೇವೆಗಾಗಿ ಯುಐಡಿಎಐಗೆ ಇಮೇಲ್ ಮೂಲಕ ಸಂಪರ್ಕಿಸಿ ಅಪಾಯಿಂಟ್‌ಮೆಂಟ್ ಪಡೆಯಬೇಕು.

-5 ವರ್ಷಗಳ ಬಳಿಕ ಮೊದಲ ಬಾರಿ ಶುಲ್ಕದಲ್ಲಿ ಏರಿಕೆ

-ಹೊಸ ಆಧಾರ್‌ ಪಡೆಯುವುದು ಎಂದಿನಂತೆ ಉಚಿತ

Read more Articles on