ಸಾರಾಂಶ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಅಕ್ರಮ ‘ಮುರಂ’ ಗಣಿಗಾರಿಕೆ ತಡೆಯಲು ಹೋದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ವಿರುದ್ಧ ‘ಎಷ್ಟು ಧೈರ್ಯ ನಿಮಗೆ?’ ಎಂದು ಬೆದರಿಕೆ ಹಾಕಿರುವುದು ವಿವಾದಕ್ಕೀಡಾಗಿದೆ.
ಸೊಲ್ಲಾಪುರ/ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಅಕ್ರಮ ‘ಮುರಂ’ ಗಣಿಗಾರಿಕೆ ತಡೆಯಲು ಹೋದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ವಿರುದ್ಧ ‘ಎಷ್ಟು ಧೈರ್ಯ ನಿಮಗೆ?’ ಎಂದು ಬೆದರಿಕೆ ಹಾಕಿರುವುದು ವಿವಾದಕ್ಕೀಡಾಗಿದೆ. ಇದಕ್ಕೆ ವಿಪಕ್ಷಗಳು ಕಿಡಿಕಾರಿದ್ದು ಅಜಿತ್ ರಾಜೀನಾಮೆಗೆ ಆಗ್ರಹಿಸಿವೆ. ಅಜಿತ್ ಬಳಿಕ ಸ್ಪಷ್ಟನೆ ನೀಡಿ. ‘ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ನನ್ನ ಉದ್ದೇಶ ಆಗಿರಲಿಲ್ಲ’ ಎಂದು ವಿವಾದ ತಣ್ಣಗೆ ಮಾಡಲು ಯತ್ನಿಸಿದ್ದಾರೆ.
ಕರ್ನಾಟಕ ಗಡಿಗೆ ಹೊಂದಿಕೊಂಡ ಸೊಲ್ಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಕುರ್ದು ಗ್ರಾಮಕ್ಕೆ ಗುರುವಾರ ತೆರಳಿದ್ದ ಕರ್ಮಲಾ ಡಿಎಸ್ಪಿ ಅಂಜನಾ ಕೃಷ್ಣ ಅವರು, ರಸ್ತೆ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುವ ‘ಮುರ್ರಮ್’ನ ಅಕ್ರಮ ಉತ್ಖನನ ಬಂದ್ ಮಾಡುವಂತೆ ಗ್ರಾಮಸ್ಥರಿಗೆ ಸೂಚಿಸಿದರು.
ಇದಕ್ಕೆ ಗ್ರಾಮಸ್ಥರು ಹಾಗೂ ಸ್ಥಳೀಯ ಕಾರ್ಯಕರ್ತರು ಆಕ್ಷೇಪಿಸಿದರು. ಆಗ ಎನ್‌ಸಿಪಿ ಕಾರ್ಯಕರ್ತ ಬಾಬಾ ಜಗತಾಪ್ ಅವರು ಅಜಿತ್ ಪವಾರ್‌ಗೆ ನೇರವಾಗಿ ಕರೆ ಮಾಡಿ, ನಂತರ ಕೃಷ್ಣ ಅವರಿಗೆ ತಮ್ಮ ಫೋನ್ ಹಸ್ತಾಂತರಿಸಿದರು. ಈ ದೃಶ್ಯವೆಲ್ಲ ವಿಡಿಯೋದಲ್ಲಿ ದಾಖಲಾಗಿದೆ.
ಆಗ ಅಜಿತ್ ಅವರು, ‘ಸದ್ಯ ಕ್ರಮ ಬೇಡ. ಸುಮ್ಮನಿರಿ’ ಎಂದು ಆರತಿಗೆ ಸೂಚಿಸಿದರು. ಇದಕ್ಕೆ ಆರತಿ, ‘ನೀವು ನನ್ನ ಸಂಖ್ಯೆಗೆ ನೇರವಾಗಿ ಕಾಲ್ ಮಾಡಿ. ಇನ್ನೊಬ್ಬರು ನನಗೆ ಡಿಸಿಎಂ ಮಾತನಾಡುತ್ತಿದ್ದಾರೆ ಎಂದು ಫೋನ್ ನೀಡಿದ್ದಾರೆ. ನನಗೆ ನಂಬಿಕೆ ಬರುತ್ತಿಲ್ಲ’ ಎಂದರು.
ಆಗ ಕೆರಳಿದ ಅಜಿತ್, ‘ಏಕ್ ಮಿನಿಟ್, ಮೈಂ ತೇರೆ ಊಪರ್ ಆಕ್ಷನ್ ಲುಂಗಾ (ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ). ನನಗೇ ನೀವು ನೇರವಾಗಿ ಕರೆ ಮಾಡಲು ಹಳುತ್ತಿದ್ದೀರಾ? ಇತನಾ ಆಪ್ಕೋ ಡೇರಿಂಗ್ ಹುವಾ ಹೈ ಕ್ಯಾ (ನಿಮಗೆ ಎಷ್ಟು ಧೈರ್ಯ?)’ ಎಂದು ಕಿಡಿಕಾರಿದರು.
ಬಳಿಕ ಖುದ್ದು ಅಜಿತ್ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ, ‘ಸದ್ಯ ಕ್ರಮ ಬೇಡ’ ಎಂದರು. ಇದಕ್ಕೆ ಆರತಿ ಪ್ರತಿಕ್ರಿಯಿಸಿ, ‘ನಿಮ್ಮ ದನಿ ಗುರುಗಿಸಲಾಗದೇ ನೀವು ಯಾರೆಂದು ಕೇಳಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಈ ಪ್ರಕರಣವು ಅಕ್ರಮಕ್ಕೆ ಅಜಿತ್ ಕುಮ್ಮಕ್ಕು ಸಾಬೀತುಪಡಿಸುತ್ತದೆ. ಅವರ ರಾಜೀನಾಮೆ ಪಡೆಯಿರಿ’ ಎಂದು ವಿಪಕ್ಷಗಳು ಆಗ್ರಹಿಸಿವೆ. ಅದರೆ ಅಜಿತ್ ಸ್ಪಷ್ಟನೆ ನೀಡಿ, ‘ಸ್ಥಳದಲ್ಲಿನ ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ಹಾಗೆ ಮಾತನಾಡಿದ್ದೆ. ಅಕ್ರಮಕ್ಕೆ ನನ್ನ ಬೆಂಬಲವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ