ಸಾರಾಂಶ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಉಚಿತ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ವಿಷಮಿಸಿದೆ. ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಎರಡು ತಿಂಗಳು ಸಂಬಳ ಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ.
ಶಿಮ್ಲಾ: ಕರ್ನಾಟಕಕ್ಕೆ ಮೊದಲು ಹಲವು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದ ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸ್ಥಿತಿ ವಿಷಮಿಸಿದೆ. ರಾಜ್ಯದ ವಾರ್ಷಿಕ ಆದಾಯ 8058 ಕೋಟಿಯಿಂದ 5258 ಕೋಟಿ ರು.ಗೆ ಕುಸಿದಿದೆ. ಹೀಗಾಗಿ ಸಾಂಕೇತಿಕವಾಗಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಸಚಿವರು ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು 2 ತಿಂಗಳು ತಮ್ಮ ಸಂಬಳ ಪಡೆಯದಿರಲು ನಿರ್ಧರಿಸಿದ್ದಾರೆ. ಈ ನಡುವೆ ‘ಗ್ಯಾರಂಟಿ ಸ್ಕೀಂಗಳೇ ಇದಕ್ಕೆ ಕಾರಣ’ ಎಂದು ಬಿಜೆಪಿ ಆರೋಪಿಸಿದೆ.
ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಸಂಕಷ್ಟ ಹಾಗೂ ತಾವು ಸಂಬಳ ಪಡೆಯದ ವಿಷಯ ಪ್ರಕಟಿಸಿದ ಸಿಎಂ ಸುಖು, ‘ನಾವು ಸಂಬಳ ಪಡೆಯದಿರಲು ನಿರ್ಧರಿಸಿದ್ದೇವೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದೇನಲ್ಲ. ಇದು ಆರ್ಥಿಕ ಸ್ಥಿತಿ ಸರಿದೂಗಿಸಲು ಸಾಂಕೇತಿಕ ಅಳಿಲು ಸೇವೆ ಇದ್ದಂತೆ. ಬಿಜೆಪಿ ಶಾಸಕರು ಕೂಡ ಇದನ್ನು ಅನುಸರಿಸಬೇಕು’ ಎಂದು ಆಗ್ರಹಿಸಿದರು.ಆದರೆ ಇದನ್ನು ವಿರೋಧಿಸಿದ ವಿಪಕ್ಷ ನಾಯಕ ಜೈರಾಂ ಠಾಕೂರ್ ನೇತೃತ್ವದ ಬಿಜೆಪಿ ಶಾಸಕರು, ‘ಮದ್ಯ ನೀತಿಯಿಂದ ರಾಜ್ಯಕ್ಕೆ ಆರ್ಥಿಕ ಹೊಡೆತ ಬಿದ್ದಿದೆ.
ಕಡಿಮೆ ದರದಲ್ಲಿ ಮದ್ಯದಂಗಡಿ ಲೈಸೆನ್ಸ್ ನೀಡಿದ್ದು ಇದಕ್ಕೆ ಕಾರಣ’ ಎಂದು ಹೇಳಿ ಸಭಾತ್ಯಾಗ ಮಾಡಿದರು.ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ದಿಲ್ಲಿಯಲ್ಲಿ ಪ್ರತಿಕ್ರಿಯಿಸಿ, ‘ಹಿಮಾಚಲದಲ್ಲಿ ಸಿಎಂ ಸಂಬಳಕ್ಕೂ ಹಣವಿಲ್ಲ. ರಾಹುಲ್ ಗಾಂಧಿ ಅವರ ಉಚಿತ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಭಯಾನಕವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಮತ್ತು ಇದು ರಾಹುಲ್ ಗಾಂಧಿಯವರ ಗ್ಯಾರಂಟಿ ಮಾದರಿಯಾಗಿದೆ. ಇದನ್ನು ಸರಿದೂಗಿಸಲು ಕರ್ನಾಟಕದಲ್ಲಿಯೂ ಹಾಲು, ನೀರಿನ ಬೆಲೆ ಹೆಚ್ಚಿಸಲಾಗಿದ. ಕರ್ನಾಟಕವೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದು ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕು. ಏಕೆಂದರೆ ಅವರ ಭರವಸೆಗಳೆಲ್ಲವೂ ಸುಳ್ಳೆಂದು ಇಂದು ಸಾಬೀತಾಗಿದೆ’ ಎಂದಿದ್ದಾರೆ.
ಸಂಕಷ್ಟಕ್ಕೆ ಕೇಂದ್ರ ಕಾರಣ- ಸುಖು: ಈ ವೇಳೆ ಮಾತನಾಡಿದ ಸುಖು, ‘ರಾಜ್ಯದ ಆದಾಯ 2023-24ರಲ್ಲಿ 8,058 ಕೋಟಿ ರು. ಇತ್ತು. ಈ ಆರ್ಥಿಕ ಸಾಲಿನಲ್ಲಿ 1800 ಕೋಟಿ ರು.ನಷ್ಟು ತಗ್ಗಿದೆ. ಅಂದರೆ 6,258 ಕೋಟಿ ರು.ಗೆ ತಗ್ಗಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ. ಕೇಂದ್ರವು 9,042 ಕೋಟಿ ರು. ವಿಕೋಪ ಪರಿಹಾರ ಹಣ ನೀಡಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನೌಕರರಿಂದ ಕಡಿತ ಮಾಡಿಕೊಂಡ 9200 ಕೋಟಿ ರು. ನಮ್ಮ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಮರುಪಾವತಿ ಮಾಡಿಲ್ಲ. 2022ರ ಜೂನ್‌ನಿಂದ ಜಿಎಸ್‌ಟಿ ಹಣ ಮರುಪಾವತಿ ಮಾಡಿಲ್ಲ’ ಎಂದರು.ಅಲ್ಲದೆ, ಹಳೇ ಪಿಂಚಣಿ ಯೋಜನೆ ಜಾರಿ ಮಾಡಿದ ನಂತರ ರಾಜ್ಯದ ಸಾಲ 2000 ಕೋಟಿ ರು.ಗೆ ಏರಿದೆ ಎಂದು ಹೇಳಿದರು.
ಹಿಮಾಚಲ ಫ್ರೀ ಸ್ಕೀಂಗಳು- ರಾಜ್ಯದ ಎಲ್ಲ ಮನೆಗಳಿಗೆ 125 ಯುನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆ
- 10, 12ನೇ ಕ್ಲಾಸ್ ವಿದ್ಯಾರ್ಥಿಗಳಿಗೆ 20 ಸಾವಿರ ಉಚಿತ ಲ್ಯಾಪ್‌ಟಾಪ್
- 10 ಲಕ್ಷ ರು. ಮೌಲ್ಯದ ಟ್ಯಾಕ್ಸಿ ಖರೀದಿಸುವವರಿಗೆ 5 ಲಕ್ಷ ರು. ಸಬ್ಸಿಡಿ
- 1 ಕೋಟಿ ರು. ಮೌಲ್ಯದ ಬಸ್ ಖರೀದಿ ಮಾಡಿದರೆ 50 ಲಕ್ಷ ರು. ಸಬ್ಸಿಡಿ- ಹಿಮಾಚಲಪ್ರದೇಶದ ಮಹಿಳೆಯರಿಗೆ 1500 ರು. ಮಾಸಿಕ ಸಹಾಯಧನ
- ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು, ಹಳೇ ಪಿಂಚಣಿ ಯೋಜನೆ ಜಾರಿ