ಸಾರಾಂಶ
ಮೈಸೂರು: ಮಹಾರಾಜ ಟ್ರೋಫಿಯ 4ನೇ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪ್ಲೇ-ಆಫ್‌ಗೆ ಹತ್ತಿರವಾಗಿದೆ. ಶುಕ್ರವಾರ ನಡೆದ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಹುಬ್ಬಳ್ಳಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ನಾಯಕ ಗುಲ್ಬರ್ಗಾ ಆರ್.ಸ್ಮರಣ್‌ರ ಸ್ಫೋಟಕ ಆಟದಿಂದ 20 ಓವರಲ್ಲಿ 7 ವಿಕೆಟ್‌ಗೆ 172 ರನ್ ಕಲೆಹಾಕಿತು. 10.2 ಓವರಲ್ಲಿ 5 ವಿಕೆಟ್‌ಗೆ 85 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಆಕರ್ಷಕ ಬ್ಯಾಟಿಂಗ್ ನಡೆಸಿದ ಎಡಗೈ ಬ್ಯಾಟರ್ ಸ್ಮರಣ್ 48 ಎಸೆತದಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 84 ರನ್ ಚಚ್ಚಿದರು.
ಸ್ಮರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ, ಮೊಹಮದ್ ತಾಹ (17) ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ದೇವದತ್ ಪಡಿಕ್ಕಲ್ ಹಾಗೂ ಕಾರ್ತಿಕೇಯ ಕೆ.ಪಿ., ಗುಲ್ಬರ್ಗಾ ಬೌಲರ್‌ಗಳ ಬೆವರಿಳಿಸಿದರು. ಪಡಿಕ್ಕಲ್ 47 ಎಸೆತದಲ್ಲಿ 69 ರನ್ ಸಿಡಿಸಿದರೆ, ಕಾರ್ತಿಕೇಯ 48 ಎಸೆತದಲ್ಲಿ 81 ರನ್ ಬಾರಿಸಿ ಔಟಾಗದೆ ಉಳಿದರು. 18.2 ಓವರಲ್ಲಿ ಹುಬ್ಬಳ್ಳಿ 2 ವಿಕೆಟ್‌ಗೆ 173 ರನ್ ಗಳಿಸಿ, ಜಯದ ನಗೆ ಬೀರಿತು.
ಸೋಲಿನ ಹೊರತಾಗಿಯೂ ಗುಲ್ಬರ್ಗಾ 3ನೇ ಸ್ಥಾನದಲ್ಲಿದ್ದು, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸ್ಕೋರ್: ಗುಲ್ಬರ್ಗಾ 20 ಓವರಲ್ಲಿ 172/7 (ಸ್ಮರಣ್ 84, ಪ್ರಜ್ವಲ್ 23, ಯಶ್ 2-25), ಹುಬ್ಬಳ್ಳಿ 18.2 ಓವರಲ್ಲಿ 173/2 (ಕಾರ್ತಿಕೇಯ 81*, ದೇವದತ್ 69, ಪ್ರವೀಣ್ 1-37)