ಸಾರಾಂಶ
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದೆ.
ಟೂರ್ನಿಯ ಪಂದ್ಯಗಳು ಆ.11ರಿಂದ 27ರ ವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕೆಎಸ್‌ಸಿಎ ಹಾಗೂ ಕೆಲ ಫ್ರಾಂಚೈಸಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.ಟೂರ್ನಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಆಯೋಜಿಸಲು ಕೆಎಸ್‌ಸಿಎ ನಿರ್ಧರಿಸಿತ್ತು.
ಆದರೆ ಪೊಲೀಸ್ ಇಲಾಖೆ ಟೂರ್ನಿಗೆ ಅನುಮತಿ ನೀಡಿಲ್ಲ. ಹೀಗಾಗಿ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ.ಜೂನ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಇತ್ತೀಚೆಗೆ ಇದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗ, ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಲೀಗ್ ಆಯೋಜನೆಗೆ ಅಗತ್ಯವಿರುವ ಅನುಮತಿಯನ್ನು ಪೊಲೀಸ್ ಇಲಾಖೆ ನಿರಾಕರಿಸಿದೆ.
ಮಹಾರಾಣಿ ಫೈನಲ್ ಚಿನ್ನಸ್ವಾಮಿಯಲ್ಲಿಲ್ಲ?
ಮಹಾರಾಣಿ ಟ್ರೋಫಿ ಆಲೂರಿನಲ್ಲಿ ನಡೆಯುತ್ತಿದೆ. ಆದರೆ ಫೈನಲ್ ಪಂದ್ಯ ಆ.10ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಈ ಪಂದ್ಯ ಕೂಡಾ ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದ್ದು, ಪಂದ್ಯವನ್ನು ಆಲೂರಿನಲ್ಲೇ ನಡೆಸುವ ನಿರೀಕ್ಷೆಯಿದೆ.