ಬೈಡೆನ್‌ ಪುತ್ರ ಹಂಟರ್‌, ನಟಿ ನೋರಾ ನಿವಾಸ ಭಸ್ಮ

| Published : Jan 10 2025, 12:48 AM IST

ಸಾರಾಂಶ

ಅಮೆರಿಕ ಕಾಡ್ಗಿಚ್ಚಿನಿಂದಾಗಿ ಅಧ್ಯಕ್ಷ ಜೋ ಬೈಡೆನ್‌ ಪುತ್ರ ಹಂಟರ್‌ ಬೈಡನ್‌ ಹಾಗೂ ಬಾಲಿವುಡ್‌ ಟಿ ನೋರಾ ಫತೇಹಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಇಬ್ಬರ ಮನೆಗಳೂ ಬೆಂಕಿಗಾಹುತಿ ಆಗಿವೆ.

ಕ್ಯಾಲಿಫೋರ್ನಿಯಾ: ಅಮೆರಿಕ ಕಾಡ್ಗಿಚ್ಚಿನಿಂದಾಗಿ ಅಧ್ಯಕ್ಷ ಜೋ ಬೈಡೆನ್‌ ಪುತ್ರ ಹಂಟರ್‌ ಬೈಡನ್‌ ಹಾಗೂ ಬಾಲಿವುಡ್‌ ಟಿ ನೋರಾ ಫತೇಹಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಇಬ್ಬರ ಮನೆಗಳೂ ಬೆಂಕಿಗಾಹುತಿ ಆಗಿವೆ.

ಹಂಟರ್‌ ಬೈಡೆನ್‌ ಅವರ ಮಲಿಬೂ ನಗರದಲ್ಲಿದ್ದ ಐಷಾರಾಮಿ ನಿವಾಸ ಸಂಪೂರ್ಣ ಸುಟ್ಟು ಬೂದಿಯಾಗಿದೆ. ರಷ್ಯಾದ ಮಾಧ್ಯಮಗಳು ಸುಟ್ಟು ಕರಕಲಾದ ಮನೆಯ ಎದುರು ಕಾರ್‌ ಒಂದು ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಹಂಚಿಕೊಂಡಿವೆ. ಈ ಮಾಹಿತಿಯನ್ನು ಬೈಡೆನ್‌ ಕೂಡ ಧೃಡಪಡಿಸಿದ್ದಾರೆ.

ಬಚಾವಾದೆ- ನೋರಾ:

ಕಾಡ್ಗಿಚ್ಚು ವೇಳೆ ಇಲ್ಲಿನ ತಮ್ಮ ಮನೆಯಲ್ಲಿದ್ದ ಬಾಲಿವುಡ್‌ ನಟಿ ನೋರಾ ಫತೇಹಿ ಕೂಡಲೇ ತಂಡದೊಂದಿಗೆ ಜಾಗ ಖಾಲಿ ಮಾಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಫತೇಹಿ, ‘ಇಂತಹ ಕಾಡ್ಗಿಚ್ಚನ್ನು ನಾನು ಎಂದೂ ನೋಡಿರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಮಗೆ ಹೊರಡಲು ಸೂಚಿಸಲಾಯಿತು. ಕೂಡಲೇ ನಾನು ನನ್ನ ತಂಡದೊಂದಿಗೆ ಮನೆಯಿಂದ ವಿಮಾನ ನಿಲ್ದಾಣದತ್ತ ತೆರಳಿದೆ’ ಎಂದಿದ್ದಾರೆ.

ಕಾಡ್ಗಿಚ್ಚಿಗೆ ಬೈಡನ್‌, ಗವರ್ನರ್‌ ನಿರ್ಲಕ್ಷವೇ ಕಾರಣ: ಟ್ರಂಪ್‌

ಲಾಸ್‌ ಏಂಜಲಿಸ್‌ನಲ್ಲಿ ಕಾಣಿಸಿಕೊಂಡ ಭಾರೀ ಕಾಡ್ಗಿಚ್ಚಿಗೆ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಇಲ್ಲಿನ ಗವರ್ನರ್‌ ಗೇವಿನ್ ನ್ಯೂಸಮ್ ಕಾರಣ ಎಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ. ಈ ಕುರಿತು ಟ್ರುಥ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಬೆಂಕಿ ನಂದಿಸಲು ನೀರಿಲ್ಲ. ಫೆಡರಲ್‌ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ(ಫೆಮಾ)ಯಲ್ಲಿ ಹಣವಿಲ್ಲ. ಕೆರೆಗಳಿಗೆ ಕಡಿಮೆ ನೀರು ಹರಿಸುವ ಮೂಲಕ ನಿಷ್ಪ್ರಯೋಜಕ ಸ್ಮೆಲ್ಟ್‌ ಮೀನುಗಳನ್ನು ರಕ್ಷಿಸಲು ಗವರ್ನರ್‌ ಯತ್ನಿಸಿದರು. ಆದರೆ ಜನರ ಬಗ್ಗೆ ಯೋಚಿಸಲಿಲ್ಲ. ಇದರಿಂದ ಅಗತ್ಯಬಿದ್ದಾಗ ಬೆಂಕಿ ಆರಿಸಲು ನೀರಿಲ್ಲದಂತಾಗಿದೆ’ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಾಡ್ಗಿಚ್ಚಿನ ಕಾರಣ ಆಸ್ಕರ್‌ ನಾಮನಿರ್ದೇಶನ ವಿಳಂಬಲಾಸ್‌ ಏಂಜಲಿಸ್‌: ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಆಸ್ಕರ್‌ ಪ್ರಶಸ್ತಿ ವಿತರಣೆ ಸಮಾರಂಭ ನಡೆವ ಡಾಲ್ಬಿ ಥಿಯೇಟರ್‌ಗೂ ಬೆಂಕಿಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜ.17ರಂದು ನಡೆಯಬೇಕಿದ್ದ ಆಸ್ಕರ್‌ ನಾಮನಿರ್ದೇಶನ ವಿಳಂಬವಾಗಿದೆ. 97ನೇ ಸುತ್ತಿನ ಪ್ರಶಸ್ತಿ ವಿಜೇತರ ಘೋಷಣೆಯನ್ನು ಜ.17ರ ಬದಲು ಜ.19ರಂದು ಮಾಡಲು ನಿರ್ಧರಿಸಲಾಗಿದೆ. ಅಂತೆಯೇ, ಆಸ್ಕರ್ ನಾಮನಿರ್ದೇಶನಕ್ಕೆ ನಡೆಯುವ ಮತದಾನವನ್ನು ಜ.14ರ ವರೆಗೆ ವಿಸ್ತರಿಸಲಾಗಿದೆ.

ಸಂತ್ರಸ್ತರಿಗೆ ಉಚಿತ ಇಂಟರ್‌ನೆಟ್‌- ಮಸ್ಕ್‌

ಲಾಸ್‌ ಏಂಜಲೀಸ್: ಗಾಡ್ಗಿಚ್ಚಿನಿಂದಾಗಿ ಲಾಸ್‌ ಏಂಜಲಿಸ್‌ನಲ್ಲಿ ವಿದ್ಯುತ್‌ ಹಾಗೂ ಇಂಟರ್‌ನೆಟ್‌ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ನೆರವಾಗಲು ಸ್ಟಾರ್‌ಲಿಂಕ್‌ ಅಂತರ್ಜಾಲ ಕಂಪನಿ ಮಾಲೀಕ, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಮುಂದಾಗಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಗುರುವಾರ ಬೆಳಗ್ಗಿನಿಂದಲೇ ಸ್ಟಾರ್‌ಲಿಂಕ್‌ ಸೇವೆಗಳ ಮೂಲಕ ಉಚಿತ ಇಂಟರ್‌ನೆಟ್‌ ನೀಡುವುದಾಗಿ ಸ್ಪೇಸ್‌ಎಕ್ಸ್‌ನ ಸಿಇಒ ಕೂಡ ಆಗಿರುವ ಎಲಾನ್‌ ಮಸ್ಕ್‌ ಘೋಷಿಸಿದ್ದಾರೆ.