ಕ್ರಿಸ್‌ ಗೇಲ್‌ ಕಾಫಿಪುಡಿ ತಯಾರಿಕಾ ಕಂಪನಿಯ ಹೆಸರಲ್ಲಿ ಸೋದರಿಗೇ ₹2.8 ಕೋಟಿ ವಂಚನೆ!

| N/A | Published : Mar 16 2025, 01:46 AM IST / Updated: Mar 16 2025, 07:07 AM IST

ಸಾರಾಂಶ

‘ಕೀನ್ಯಾ ಕಾಫಿಪುಡಿ ತಯಾರಿಕಾ ಕಂಪನಿಯಲ್ಲಿ ಹೂಡಿಕೆ ಮಾಡು. ಅದಕ್ಕೆ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಕ್ರೀಸ್‌ ಗೇಲ್ ರಾಯಭಾರಿ’ ಎಂದು 60 ವರ್ಷದ ಸೋದರಿಗೆ ನಂಬಿಸಿದ ವ್ಯಕ್ತಿಯೊಬ್ಬ, ಆಕೆಗೆ 2.8 ಕೋಟಿ ರು. ವಂಚಿಸಿದ ಘಟನೆ ನಡೆದಿದೆ.

ಹೈದರಾಬಾದ್‌: ‘ಕೀನ್ಯಾ ಕಾಫಿಪುಡಿ ತಯಾರಿಕಾ ಕಂಪನಿಯಲ್ಲಿ ಹೂಡಿಕೆ ಮಾಡು. ಅದಕ್ಕೆ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಕ್ರೀಸ್‌ ಗೇಲ್ ರಾಯಭಾರಿ’ ಎಂದು 60 ವರ್ಷದ ಸೋದರಿಗೆ ನಂಬಿಸಿದ ವ್ಯಕ್ತಿಯೊಬ್ಬ, ಆಕೆಗೆ 2.8 ಕೋಟಿ ರು. ವಂಚಿಸಿದ ಘಟನೆ ನಡೆದಿದೆ.

2019ರಲ್ಲಿ ಹೈದರಾಬಾದಿನ ಮಹಿಳಾ ಉದ್ಯಮಿಯೊಬ್ಬರಿಗೆ ಆಕೆಯ ಸಹೋದರ ಮತ್ತು ಆತನ ಪತ್ನಿ ಕಾಫಿ ಪುಡಿ ತಯಾರಿಕಾ ಕಂಪನಿಯೊಂದಕ್ಕೆ ಹೂಡಿಕೆ ಮಾಡುವಂತೆ ಕೇಳಿದ್ದರು.‘ಆ ಕಂಪನಿ ಕೀನ್ಯಾ ಮೂಲದ್ದು, ಅಮೆರಿಕದಲ್ಲಿ ಪ್ರಾರಂಭವಾಗುತ್ತಿದೆ. ಮಾತ್ರವಲ್ಲದೇ ಮಾಸಿಕ ಶೇ.4ರಷ್ಟು ಲಾಭ ಬರುತ್ತದೆ. ಕಂಪನಿಗೆ ಕ್ರಿಸ್‌ ಗೇಲ್‌ ಪ್ರಚಾರಕ’ ಎಂದು ಸುಳ್ಳು ಹೇಳಿದ್ದರು.

ಇದನ್ನು ನಂಬಿದ ಮಹಿಳೆ 2.8 ಕೋಟಿ ರು. ಹೂಡಿದ್ದರು. ಅಲ್ಲದೇ ತನ್ನ ಮನೆಯವರು, ಸ್ನೇಹಿತರು ಹಣ ಹೂಡುವಂತೆ ಕೇಳಿದ್ದ ಮಹಿಳೆ, ಅವರಿಂದಲೂ 2.2 ಕೋಟಿ ರು. ಹಾಗೂ ಇತರರಿಂದ 70 ಲಕ್ಷ ರು. ಹೂಡಿಕೆ ಮಾಡಿಸಿದ್ದರು. ಒಟ್ಟು 5.7 ಕೋಟಿ ರು. ಹಣವನ್ನು ಕಂಪನಿಗೆ ಹೂಡಿಕೆ ಮಾಡಲಾಗಿತ್ತು.

ಮೊದಲು ಲಾಭ ನೀಡುತ್ತಿದ್ದ ವಂಚಕರು 90 ಲಕ್ಷ ರು. ಹಣವನ್ನು ಮಾತ್ರ ಹಿಂದಿರುಗಿಸಿ ಆಮೇಲೆ ನಿಲ್ಲಿಸಿದ್ದರು. ಮಹಿಳೆ ಪ್ರಶ್ನಿಸಿದ್ದಕ್ಕೆ ನಿಂದಿಸಿದ್ದರು. ಹೀಗಾಗಿ ಮಹಿಳೆ ನೀಡಿದ ದೂರಿನನ್ವಯ ಸೋದರ ಸೇರಿ6 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಫಾಸ್ಟ್ಯಾಗ್‌ ಇಲ್ಲದಿದ್ರೆ ದುಪ್ಪಟ್ಟು ಟೋಲ್‌: ಹೈಕೋರ್ಟ್‌ ಸಮ್ಮತಿ ಮುಂಬೈ: ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಜಾರಿ ತಂದಿರುವ ಫಾಸ್ಟ್ಯಾಗ್‌ ಸುಂಕ ವಸೂಲಿಗೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿದೆ. ಅಲ್ಲದೇ ಈ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದವರಿಗೆ ದುಪಟ್ಟು ಟೋಲ್‌ ಹಾಕುವುದನ್ನೂ ಎತ್ತಿ ಹಿಡಿದಿದೆ.

ಪುಣೆಯ ಅರ್ಜುನ್‌ ಖಾನಾಪುರೆ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ‘ಫಾಸ್ಟ್ಯಾಗ್‌ನಿಂದ ಜನರ ಮೂಲಭೂತ ಹಕ್ಕಿಗೆ ತೊಂದರೆಯಾಗುತ್ತಿದೆ. ಸ್ವತಂತ್ರವಾಗಿ ಸಂಚರಿಸಲು ಆಗುತ್ತಿಲ್ಲ. ಅಲ್ಲದೇ ಸರಿಯಾದ ಮೂಲಸೌಕರ್ಯವಿಲ್ಲದೇ ತಾಂತ್ರಿಕ ದೋಷಗಳು ಆಗುತ್ತಿವೆ’ ಎಂದಿದ್ದರು. ಈ ವಾದ ತಿರಸ್ಕರಿಸಿದ ಪೀಠ, ‘ಫಾಸ್ಟ್ಯಾಗ್‌ ಎಂಬುದು ಸರ್ಕಾರದ ನೀತಿ. ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ. ಇದರಿಂದ ಮೂಲಭೂತ ಹಕ್ಕಿಗೆ ತೊಂದರೆ ಆಗಲ್ಲ. ಸುಗಮ ಸಂಚಾರಕ್ಕೆ ಇದರಿಂದ ನೆರವಾಗುತ್ತದೆ’ ಎಂದು ಹೇಳಿ ಅರ್ಜಿ ವಜಾಮಾಡಿತು.

ಡಾನ್ಸ್ ಮಾಡಲ್ಲ ಎಂದರೆ ಸಸ್ಪೆಂಡ್‌: ಪೊಲೀಸ್‌ಗೆ ಲಾಲು ಪುತ್ರ ಧಮ್ಕಿ  ಪಟನಾ: ‘ಕುಣಿಯದೇ ಇದ್ದರೆ ಅಮಾನತು ಮಾಡಬೇಕಾದೀತು’ ಎಂದು ಪೊಲೀಸರಿಗೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಮಾಜಿ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.ಪಟನಾದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಹೋಳಿ ಸಡಗರದಲ್ಲಿ ಮೈಕ್‌ ಹಿಡಿದು ಮಾತನಾಡಿದ ತೇಜ್‌ ‘ಏ ಪೊಲೀಸ್‌, ಇಲ್ಲಿ ನೋಡು, ಹಾಡಿಗೆ ಡಾನ್ಸ್‌ ಮಾಡು. ಇದು ಹೋಳಿ.. ಏನೂ ತೊಂದರೆಯಿಲ್ಲ. ಇಲ್ಲದಿದ್ದರೆ, ಸಸ್ಪೆಂಡ್‌ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಇದರ ಬೆನ್ನಲ್ಲೇ ಪೊಲೀಸ್‌ ಕುಣಿದರು.ಇದಕ್ಕೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ತಂದೆ ಲಾಲು ಸಹ ಹೀಗೆ ಬಿಹಾರವನ್ನು ಜಂಗಲ್‌ ರಾಜ್‌ ಮಾಡಿದ್ದರು. ಈಗ ತೇಜ್ ಸಹ ಅದೇ ಹಾದಿಯಲ್ಲಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಅಮೃತಸರ ದೇಗುಲ ಮೇಲೆ ಗ್ರೆನೇಡ್‌ ದಾಳಿ: ಐಎಸ್‌ಐ ಕೈವಾಡ ಶಂಕೆಅಮೃತಸರ: ಪಂಜಾಬ್‌ನ ಅಮೃತಸರ ಗುರುದ್ವಾರದಲ್ಲಿ ಕಬ್ಬಿಣದ ರಾಡ್‌ ದಾಳಿ ನಡೆದ ಮರುದಿನವೇ ದೇವಾಲಯವೊಂದರ ಮೇಲೆ ಗ್ರೆನೇಡ್‌ ದಾಳಿ ನಡೆದಿದೆ. ದಾಳಿಯಲ್ಲಿ ಪಾಕ್‌ ಕೈವಾಡದ ಶಂಕೆ ಇದೆ.ಶನಿವಾರ ತಡರಾತ್ರಿ 12.35ಕ್ಕೆ ಖಂಡ್ವಾಲಾ ಪ್ರದೇಶದ ಠಾಕೂರ್‌ ದ್ವಾರ್‌ ದೇವಸ್ಥಾನದ ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಆಗ ಸ್ಫೋಟವು ಆ ಪ್ರದೇಶದಲ್ಲಿ ಭೀತಿ ಉಂಟುಮಾಡಿತು. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ದಾಳಿಯ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಇಬ್ಬರು ಯುವಕರು ಬೈಕ್‌ ಮೇಲೆ ಬಂದು ಧ್ವಜ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅವರು ದೇವಾಲಯದ ಹೊರಗೆ ಸ್ವಲ್ಪ ಹೊತ್ತು ನಿಂತು, ನಂತರ ಆವರಣದ ಕಡೆ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ.ಪಾಕ್‌ ನಂಟು ಶಂಕೆ:

ಪಂಜಾಬ್‌ ಸಿಎಂ ಭಗವಂತ ಮಾನ್‌ ಹಾಗೂ ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಭುಲ್ಲರ್ ಮಾತನಾಡಿ ದಾಳಿಯಲ್ಲಿ ಪಾಕಿಸ್ತಾನದ ಸಂಭಾವ್ಯ ನಂಟು ಇರುವ ಶಂಕೆ ಇದೆ. ದಾಳಿಕೋರರಿಗೆ ಬಲೆ ಬೀಸಲಾಗಿದೆ ಎಂದಿದ್ದಾರೆ.

ರೈತ ನಾಯಕ ಟಿಕಾಯತ್ ಕಾರಿಗೆ ನೀಲ್ಗಾಯ್‌ ಡಿಕ್ಕಿ: ಸ್ವಲ್ಪದರಲ್ಲೇ ಪಾರು

ಮುಜಾಫರ್‌ನಗರ: ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ, ರೈತ ನಾಯಕ ರಾಕೇಶ್‌ ಟಿಕಾಯತ್‌ ಕಾರಿಗೆ ಮುಜಾಫರ್‌ ನಗರದಲ್ಲಿ ನೀಲ್ಗಾಯ್ ಡಿಕ್ಕಿ ಹೊಡೆದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಅವರು ಪಾರಾಗಿದ್ದಾರೆ.ಇಲ್ಲಿನ ಮೀರ್‌ಪುರ್‌ ಬೈಪಾಸ್‌ ರಸ್ತೆಯಲ್ಲಿ ಟಿಕಾಯತ್ ತೆರಳುತ್ತಿದ್ದಾಗ ಇದ್ದಕ್ಕಿದಂತೆ ಅವರ ಕಾರಿಗೆ ನೀಲ್ಗಾಯ್‌ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಟಿಕಾಯತ್‌, ಕಾರಿನ ಏರ್‌ಬ್ಯಾಗ್‌ ತೆರೆದ ಕಾರಣ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಅದರೆ ಅವರ ಗನ್‌ಮ್ಯಾನ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ರಾಕೇಶ್‌ ಟಿಕಾಯತ್‌ ಪ್ರತಿಕ್ರಿಯಿಸಿ ‘ಸೀಟ್‌ ಬೆಲ್ಟ್‌ ಧರಿಸಿದ್ದರಂತೆ ಅದು ನಮಗೆ ಭದ್ರತೆ ನೀಡಿತು. ಅಪಾಯವನ್ನು ತಪ್ಪಿಸಿತು’ ಎಂದಿದ್ದಾರೆ.

2026ನೇ ಸಾಲಿನ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಪ್ರಕ್ರಿಯೆ ಶುರು

ನವದೆಹಲಿ: 2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಆನ್‌ಲೈನ್ ನಾಮನಿರ್ದೇಶನ ಮತ್ತು ಶಿಫಾರಸು ಪ್ರಕ್ರಿಯೆ ಶನಿವಾರದಿಂದ (ಮಾ.15) ಪ್ರಾರಂಭವಾಗಿದೆ. ಜುಲೈ 31ರವರೆಗೆ ನಾಮನಿರ್ದೇಶನ ಮಾಡಲು ಅವಕಾಶ ಇದೆ.ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಜನರೇ ಗುರುತಿಸಿ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ನಲ್ಲಿ (https://awards.gov.in) ಆನ್‌ಲೈನ್‌ ಮೂಲಕ ನಾಮನಿರ್ದೇಶನ ಮಾಡಬಹುದಾಗಿದೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳು ಇದರಲ್ಲಿ ಸೇರಿದ್ದು, ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನ ಘೋಷಣೆ ಮಾಡಲಾಗುತ್ತದೆ.

ತೆಲಂಗಾಣದಲ್ಲಿ ಒಂದೇ ದಿನ 64 ಮಾವೋವಾದಿಗಳು ಶರಣು

ಹೈದರಾಬಾದ್‌: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಗುಂಪಿಗೆ ಸೇರಿದ 64 ನಕ್ಸಲರು ಶನಿವಾರ ಒಂದೇ ದಿನ ಪೊಲೀಸರಿಗೆ ಶರಣಾಗಿದ್ದಾರೆ.ಛತ್ತೀಸಗಢ ಮತ್ತು ತೆಲಂಗಾಣ ಗಡಿ ಗ್ರಾಮಗಳ ಪ್ರದೇಶ ಸಮಿ ತಿ(ಎಸಿಎಂ) ಸದಸ್ಯ ಸೇರಿದಂತೆ ವಿವಿಧ ನಕ್ಸಲ್ ಗುಂಪಿಗೆ ಸೇರಿದ 64 ಮಾವೋವಾದಿಗಳು ಐಜಿಪಿ ಬಹು - ವಲಯ I ಮತ್ತು ಜಿಲ್ಲಾ ಪೊಲೀಸರ ಮುಂದೆ ಶರಣಾದರು. ಈ ಮೂಲಕ ಜಿಲೆಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಪೊಲೀಸರ ಮುಂದೆ ಶರಣಾದ ಮಾವೋವಾದಿಗಳ ಸಂಖ್ಯೆ 122ಕ್ಕೇರಿಕೆ ಆಗಿದೆ.

ಹೋಳಿ ವೇಳೆ ಬಂಗಾಳದ ಬೀರ್‌ಭೂಮ್‌ನಲ್ಲಿ ಕೋಮು ಹಿಂಸೆ

ಸೂರಿ (ಪ.ಬಂಗಾಳ): ಹೋಳಿ ಆಚರಣೆ ವೇಳೆ ಪಶ್ಚಿಮ ಬಂಗಾಳದ ಬೀರ ಜಿಲ್ಲೆಯಲ್ಲಿ 2 ಗುಂಪುಗಳ ನಡುವೆ ಕೋಮು ಘರ್ಷಣೆ ಸಂಭವಿಸಿದೆ. 21 ಜನರನ್ನು ಬಂಧಿಸಲಾಗಿದ್ದು, ಮಾ.17ರವರೆಗೆ ಮೊಬೈಲ್‌ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.‘ಶುಕ್ರವಾರ ಸಂಜೆ ಸೈಂಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘರ್ಷಣೆ ನಡೆದಿದೆ. ಮಾಹಿತಿ ಬರುತ್ತಿದ್ದಂತೆಯೇ, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರದೇಶದಲ್ಲಿ ಯಾವುದೇ ಪ್ರಚೋದನಕಾರಿ ಘಟನೆ ನಡೆಯದಂತೆ ಸೈಂಥಿಯಾ ಮತ್ತು ಪಕ್ಕದ 5 ಪಂಚಾಯತ್ ಪ್ರದೇಶಗಳಲ್ಲಿ ಮಾ.17ರವರೆಗೆ ಮೊಬೈಲ್‌ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.