ಕೇಂದ್ರದ ಬಹುತೇಕ ವಿದೇಶಾಂಗ ನೀತಿಗೆ ನಮ್ಮ ಬೆಂಬಲ-ಚೀನಾ ವಿಷಯದಲ್ಲಿ ಪ್ರಧಾನಿ ಮೋದಿ ವಿಫಲ : ರಾಹುಲ್ ಗಾಂಧಿ

| Published : Sep 12 2024, 01:53 AM IST / Updated: Sep 12 2024, 05:07 AM IST

ಸಾರಾಂಶ

ಲಡಾಖ್‌ನಲ್ಲಿ ಚೀನಾ ಭಾರತದ 4000 ಚದರ ಕಿ.ಮೀ. ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ವಿಷಯವನ್ನು ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.  

  ವಾಷಿಂಗ್ಟನ್‌ :  ಕೇಂದ್ರ ಸರ್ಕಾರದ ಬಹುತೇಕ ವಿದೇಶಾಂಗ ನೀತಿಗೆ ನಮ್ಮ ಬೆಂಬಲ ಇದೆ. ಆದರೆ ಚೀನಾ ವಿಷಯದಲ್ಲಿ ಪ್ರಧಾನಿ ಮೋದಿ ವಿಫಲವಾಗಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಅಮೆರಿದಕದ ನ್ಯಾಷನಲ್‌ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾದ ಸೈನಿಕರು ಲಡಾಖ್‌ನಲ್ಲಿ ಭಾರತಕ್ಕೆ ಸೇರಿದ 4000 ಚದರ ಕಿ.ಮೀ. ಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದಾರೆ. ಅಂದರೆ ಸುಮಾರು ರಾಜಧಾನಿ ನವದೆಹಲಿಯ ಗಾತ್ರದಷ್ಟು ಪ್ರದೇಶ ಚೀನಾ ವಶವಾಗಿದೆ. ನನ್ನ ಲೆಕ್ಕಾಚಾರದಲ್ಲಿ ಇದೊಂದು ದುರಂತ. ಒಂದು ವೇಳೆ ಅಮೆರಿಕದ 4000 ಚ.ಕಿ.ಮೀ ಪ್ರದೇಶವನ್ನು ಯಾರಾದರೂ ಅತಿಕ್ರಮಣ ಮಾಡಿದ್ದರೆ, ಅದರಿಂದ ಯಾವುದೇ ಅಧ್ಯಕ್ಷರು ಪಾರಾಗಲು ಸಾಧ್ಯವಿತ್ತೇ? ಈ ಲೆಕ್ಕಾಚಾರದಲ್ಲಿ ನೋಡಿದರೆ ಚೀನಾ ವಿಷಯ ನಿರ್ವಹಣೆಯಲ್ಲಿ ಮೋದಿ ವಿಫಲವಾಗಿದ್ದನ್ನು ಕಾಣಬಹುದು’ ಎಂದರು.

ಮೋದಿಯ ಅನ್ಯ ವಿದೇಶಾಂಗ ನೀತಿ ಸರಿ:

ಆದರೆ ಮೋದಿ ಅವರ ಇತರ ವಿದೇಶಾಂಗ ನೀತಿಗಳ ಬಗ್ಗೆ ರಾಹುಲ್‌ ಮೆಚ್ಚುಗೆ ಸೂಚಿಸಿದರು.

‘ಅಮೆರಿಕದ ಜೊತೆಗಿನ ಸಂಬಂಧವಿರಬಹುದು, ಉಗ್ರವಾದ ನಿಲ್ಲಿಸದೇ ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂಬ ನಿಲುವಾಗಿರಬಹುದು ಅಥವಾ ಇಸ್ರೇಲ್‌ ಮತ್ತು ಬಾಂಗ್ಲಾದೇಶದಲ್ಲಿನ ತೀವ್ರಗಾಮಿ ಶಕ್ತಿಗಳ ಬಗ್ಗೆ ಕಳವಳಕಾರಿ ನಿಲುವಾಗಿರಬಹುದು, ಈ ವಿಷಯದಲ್ಲಿ ನಾವು ಕೇಂದ್ರದ ನೀತಿಯೊಂದಿಗೆ ಸಹಮತ ಹೊಂದಿದ್ದೇವೆ. ಈ ವಿಷಯಗಳಲ್ಲಿ ಈ ಹಿಂದಿನ ನಮ್ಮ ಸರ್ಕಾರ ಅನುಸರಿಸಿಕೊಂಡು ಬಂದಿದ್ದ ನೀತಿಯಲ್ಲಿ ಮೋದಿ ಸರ್ಕಾರ ಹೆಚ್ಚಿನ ಬದಲಾವಣೆ ಏನೂ ಮಾಡಿಲ್ಲ’ ಎಂದು ರಾಹುಲ್‌ ನುಡಿದರು.