ಸಾರಾಂಶ
ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಚೆಸ್ ಮೇಲಿನ ಪ್ರೀತಿ ವೈರಲ್ ಆದ ಬೆನ್ನಲ್ಲೇ ‘ಉನ್ನತ ಸ್ಥಾನಕ್ಕೆ ಸವಾಲೊಡ್ಡುವ ಮುನ್ನ ಮೊದಲು ರಾಯ್‌ಬರೇಲಿ ಗೆಲ್ಲಿ’ ಎಂಬ ಹೇಳಿಕೆ ನೀಡಿದ್ದ ಚೆಸ್ ಮಾಜಿ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೇಳಿಕೆಯನ್ನು ಒಂದು ಸಣ್ಣ ಜೋಕ್ ಎಂದು ಪರಿಗಣಿಸಿ. ಅದು ಬಿಟ್ಟು ಭಾರತ ರಾಜಕಾರಣ ಕುರಿತ ಅನುಭವ ಅಥವಾ ಸಮರ್ಥನೆ ಎಂದು ಭಾವಿಸಬೇಡಿ’ ಎಂದು ಹೇಳಿದ್ದಾರೆ.
‘ನನ್ನ ಸಣ್ಣ ಜೋಕ್ ನಾನು ಭಾರತೀಯ ರಾಜಕಾರಣದ ಸಮರ್ಥಕ ಅಥವಾ ಅನುಭವಿ ಎಂಬ ಸಂದೇಶ ಪಸರಿಸಬಾರದು ಎಂಬ ವಿಶ್ವಾಸ ಹೊಂದಿದ್ದೇನೆ. ನನ್ನ ನೆಚ್ಚಿನ ಆಟದಲ್ಲಿ ತೊಡಗಿಕೊಳ್ಳುವ ರಾಜಕಾರಣಿ ವಿಫಲನಾಗುವುದನ್ನು ನಾನು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಭಾರತೀಯ ರಾಜಕಾರಣಿಗಳ ಪೈಕಿ ತಾವೊಬ್ಬ ಅತ್ಯುತ್ತಮ ಚೆಸ್ ಆಟಗಾರ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು. ಕಾಂಗ್ರೆಸ್ ಕೂಡ ರಾಹುಲ್ ಗಾಂಧಿ ಅವರು ಮೊಬೈಲ್‌ನಲ್ಲಿ ಚೆಸ್ ಆಡುತ್ತಿರುವ ವಿಡಿಯೋವನ್ನು ಬಿತ್ತರಿಸಿತ್ತು. ಅದಕ್ಕೆ ಟ್ವೀಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಲೇಖಕ ಸಂದೀಪ್ ಗೂಸೆ ‘ಗ್ಯಾರಿ ಕ್ಯಾಸ್ಪರೋವ್ ಹಾಗೂ ವಿಶ್ವನಾಥನ್ ಅವರು ಬೇಗನೆ ನಿವೃತ್ತರಾಗಿದ್ದಾರೆ. ತನ್ಮೂಲಕ ನಮ್ಮ ಕಾಲದ ಚೆಸ್ ಪ್ರತಿಭೆಯನ್ನು ಮುಖಾಮುಖಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ’ ಎಂಬರ್ಥದಲ್ಲಿ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಗ್ಯಾರಿ, ‘ಟಾಪ್‌ಗೆ ಸವಾಲೊಡ್ಡುವ ಮುನ್ನ ರಾಯ್‌ಬರೇಲಿ ಗೆಲ್ಲಿ’ ಎಂದು ಬರೆದದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.