ಸಾರಾಂಶ
ನವದೆಹಲಿ: ಚಿಕ್ಕಂದಿನಲ್ಲಿ ತಾನು ಬಹಳ ತುಂಟಿಯಾಗಿದ್ದೆ. ಒಂದು ಸೋಫಾದಿಂದ ಮತ್ತೊಂದಕ್ಕೆ ಜಿಗಿಯುತ್ತಿದ್ದೆ. ಗಣಿತದಲ್ಲಿ ಬಹಳ ಹಿಂದೆ ಇದ್ದೆ ಎಂದು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗಾಗಿ ನಡೆಸಿಕೊಡುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ದೀಪಿಕಾ ಈ ಕಾರ್ಯಕ್ರಮದ ತುಣುಕೊಂದನ್ನು ಸೋಮವಾರ ಹಂಚಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು ದೀಪಿಕಾ, ‘ನಿಮ್ಮ ಸ್ನೇಹಿತರು, ಕುಟುಂಬ, ಪೋಷಕರು, ಶಿಕ್ಷಕರು, ಯಾರೇ ಇರಲಿ, ಅವರೊಂದಿಗೆ ನಿಮ್ಮತನವನ್ನು ಅಭಿವ್ಯಕ್ತಿಸಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ, ಮುಂದೆ ನಾನು ಚಿತ್ರರಂಗ ಸೇರಿದ ಮೇಲೆ ಸತತವಾಗಿ ಕೆಲಸ ಮಾಡುತ್ತಲೇ ಇದ್ದೆ. ಒಂದು ದಿನ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದೆ. ಕೆಲ ದಿನಗಳ ನಂತರ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂಬುದು ತಿಳಿಯಿತು. ಇದು ಎಲ್ಲರಿಗೂ ಪಾಠ. ವಿದ್ಯಾರ್ಥಿಗಳು ಖಿನ್ನರಾಗುವ ಬದಲಿಗೆ, ಪರೀಕ್ಷಾ ಯೋಧರಾಗಿ ಹೊರಬರಬೇಕು. ಅದಕ್ಕಾಗಿ ಇಂಥದ್ದೊಂದು ವೇದಿಕೆ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಎಲ್ಲರಿಗೂ ಶುಭ ಹಾರೈಸುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ. ದೀಪಿಕಾ ಕಾರ್ಯಕ್ರಮ ಫೆ.12ರ ಮಂಗಳವಾರ ಪ್ರಸಾರವಾಗಲಿದೆ.