ಸಾರಾಂಶ
ಶಹಜಹಾನ್ಪರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಗುವಿನ ವಾತಾವರಣ ನಡುವೆಯೇ ಉತ್ತರಪ್ರದೇಶದ ಗಂಗಾ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಭಾರತೀಯ ವಾಯುಪಡೆ ಶುಕ್ರವಾರ ಯುದ್ಧವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್ ಅಭ್ಯಾಸ ನಡೆಸಿದೆ.
ಅರಬ್ಬಿ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆಗಳು ಭರ್ಜರಿ ಸಮರಾಭ್ಯಾಸ ನಡೆಸಿದ ಹೊತ್ತಿನಲ್ಲೇ ವಾಯುಪಡೆ ಕೂಡಾ ವಿಮಾನ ನಿಲ್ದಾಣ ಹೊರತಾದ ಪ್ರದೇಶಗಳಲ್ಲೂ ಯುದ್ಧ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಅಭ್ಯಾಸ ಮಾಡಿವೆ.
ಶುಕ್ರವಾರದ ಕಸರತ್ತಿನ ವೇಳೆ ರಫೇಲ್, ಸುಕೋಯ್-30 ಎಂಕೆಐ, ಮಿರಾಜ್, ಮಿಗ್-29, ಜಾಗ್ವಾರ್, ಸಿ-120ಜೆ ಸೂಪರ್ ಹರ್ಕ್ಯುಲಸ್, ಎಎನ್-32, ಮಿ-17 ವಿ5 ಹೆಲಿಕಾಪ್ಟರ್‌ಗಳನ್ನು ಕಡಿಮೆ ಎತ್ತರದಲ್ಲಿ ಹಾರಿಸಿ, ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಿ ಪರೀಕ್ಷಿಸಲಾಗಿದೆ.
ಈಗಾಗಲೇ, ಲಖನೌ-ಆಗ್ರಾ ಮತ್ತು ಪೂರ್ವಾಂಚಲ ಎಕ್ಸ್‌ಪ್ರೆಸ್ ಮಾರ್ಗಗಳಲ್ಲೂ ನಿರ್ದಿಷ್ಟ ಪ್ರದೇಶಗಳನ್ನು ರನ್‌ವೇ ಮಾದರಿ ಅಭಿವೃದ್ಧಿಪಡಿಸಿ ತುರ್ತು ಸಮಯದಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಎರಡು ಹೆದ್ದಾರಿಗಳಲ್ಲಿ ಹಗಲು ಹೊತ್ತು ಮಾತ್ರವೇ ಈ ಕಸರತ್ತು ನಡೆಸಬಹುದು.
ಆದರೆ ಗಂಗಾ ಎಕ್ಸ್‌ಪ್ರೆಸ್‌ವೇನ 3.5 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಯುದ್ಧ ವಿಮಾನಗಳನ್ನು ಹಗಲು ಮತ್ತು ರಾತ್ರಿ ಎರಡೂ ಹೊತ್ತು ಇಳಿಸಬಹುದು ಮತ್ತು ಅಲ್ಲಿಂದ ಹಾರಿಸಬಹುದು. ಇಂಥ ಅವಕಾಶ ಇರುವ ದೇಶದ ಏಕೈಕ ಹೆದ್ದಾರಿ ಇದು.
ಪ್ರಯೋಜನೆವೇನು?:
ಯುದ್ಧದ ಸಂದರ್ಭದಲ್ಲಿ ವಾಯುನೆಲೆಯ ಮೇಲೆ ದಾಳಿಯಾದಾಗ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಯುದ್ಧವಿಮಾನಗಳು ಹೆದ್ದಾರಿಗಳಲ್ಲೇ ಕೆಳಗಿಳಿಯಲು ಅಥವಾ ಟೇಕಾಫ್ ಮಾಡಲು ಈ ಹೆದ್ದಾರಿಗಳು ಅನುಕೂಲ.
ಈ ಮಾರ್ಗದಲ್ಲಿ 250 ಸಿಸಿಟೀವಿ ಅಳವಡಿಸಲಾಗಿದ್ದು, ಕಣ್ಗಾವಲು ಮತ್ತು ತಕ್ಷಣದ ಪ್ರತಿಕ್ರಿಯೆ ಸಾಧ್ಯವಾಗುತ್ತದೆ.