ಸಾರಾಂಶ
ಪುಣೆ: ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅಕ್ರಮವಾಗಿ ಕೆಂಪು ಬೀಕನ್ ಅಳವಡಿಸಿ ಮಹಾರಾಷ್ಟ್ರ ಸರ್ಕಾರ ಎಂದು ಬರೆಸಿಕೊಂಡಿದ್ದ ದುಬಾರಿ ಆಡಿ ಕಾರನ್ನು ಪುಣೆ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಹವೇಲಿ ತಾಲೂಕಿನ ಶಿವನೆಯಲ್ಲಿ ನೋಂದಾಯಿತವಾಗಿರುವ ಕಾರಿನ ಮಾಲೀಕರಿಗೆ ಪುಣೆ ಪ್ರಾದೇಶಿಕ ಸಾರಿಗೆ ಕಛೇರಿ ಗುರುವಾರ ನೋಟಿಸ್ ಜಾರಿ ಮಾಡಿತ್ತು. ‘ವಶಕ್ಕೆ ಪಡಿದಿರುವ ಕಾರಿನ ದಾಖಲೆಗಳನ್ನು ಪರಿಶೀಲಿಸಲಾಗುವುದು. ಕಾರಿನ ಮೇಲೆ ಜ್ಯಾಮರ್ ಅಳವಡಿಸಿ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
2012ರ ವರೆಗೆ ಈ ಕಾರಿನ ಮೇಲೆ ಸಂಚಾರಿ ನಿಯಮ ಉಲ್ಲಂಘನೆಯ 21 ಕೇಸುಗಳು ದಾಖಲಾಗಿದ್ದು, ದಂಡದ ಮೊತ್ತ 27,000 ರು. ಎನ್ನಲಾಗಿದೆ.
ಪೂಜಾ ಅಕ್ರಮವಾಗಿ ಐಎಎಸ್ ಅಧಿಕಾರಿಯಾಗಿ ನೇಮಕ ಆಗಿರುವ ಆರೋಪ ಹೊತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಿದೆ. ಆರೋಪಗಳು ಸಾಬೀತಾದಲ್ಲಿ ಆಕೆಯನ್ನು ಸೇವೆಯಿಂದ ವಜಾ ಗೊಳಿಸಲಾಗುವುದು.
ತ.ನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷನ ಹಂತಕ ಎನ್ಕೌಂಟರ್‌ಗೆ ಬಲಿ
ಚೆನ್ನೈ: ತಮಿಳುನಾಡು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೆ. ಆರ್ಮಸ್ಟ್ರಾಂಗ್ ಹತ್ಯೆ ಆರೋಪಿಯನ್ನು ಭಾನುವಾರ ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ.ಕೊಲೆ ಆರೋಪಿ ಕೆ. ತಿರುವೆಂಗಡಂನನ್ನು ಪೊಲೀಸ್ ಮೇಲೆ ಹಲ್ಲೆ ನಡೆಸಿ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ವೇಳೆ ಆತನನ್ನು ಗುಂಡಿಕ್ಕಿ ಸಾಯಿಸಲಾಗಿದೆ.
ತನಿಖೆಯ ಭಾಗವಾಗಿ ಉತ್ತರ ಚೆನ್ನೈಗೆ ಆತನನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಮುಂದಾಗಿದ್ದ. ಆಗ ಆತನ ಪೊಲೀಸರು ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.ಕೆ. ಆರ್ಮಸ್ಟ್ರಾಂಗ್ ಕೊಲೆ ಪ್ರಕರಣದಲ್ಲಿ ಬಂಧಿತವಾಗಿರುವ 11 ಆರೋಪಿಗಳು ಪೈಕಿ ಈತ ಕೂಡ ಒಬ್ಬ.
ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿ ಗೌರವ್ ಗೊಗೋಯ್ ಆಯ್ಕೆ
ನವದೆಹಲಿ: ಅಸ್ಸಾಂನ ಸಂಸದ ಗೌರವ್ ಗೊಗೋಯ್ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. 8 ಬಾರಿ ಕೇರಳದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದ ಕೋಡಿಕುನ್ನಿಲ್ ಸುರೇಶ್ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯ ಸ್ಪೀಕರ್ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ಸಚೇತಕರನ್ನು ನೇಮಿಸುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.ವಿರುದುನಗರ ಸಂಸದ ಮಾಣಿಕ್ಯಂ ಟ್ಯಾಗೋರ್ ಮತ್ತು ಕಿಶನ್‌ಗಂಜ್ ಸಂಸದ ಮೊಹಮ್ಮದ್ ಜಾವೇದ್‌ರನ್ನು ಲೋಕಸಭೆಯಲ್ಲಿ ಪಕ್ಷದ ಸಚೇತಕರಾಗಿ ಆಯ್ಕೆ ಮಾಡಲಾಗಿದೆ.